ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸೂಚನೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಿಎಂ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಮ್ಲಜನಕ ಪೂರೈಕೆ ಬಗ್ಗೆ ಜಿಲ್ಲಾಡಳಿತಗಳಿಂದ ಕ್ರಮಕೈಗೊಂಡಿದ್ದು, ಅಗತ್ಯವಿರುವವರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತದೆ. ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಅಗತ್ಯವಿರುವವರಿಗೆ ಚಿಕಿತ್ಸೆ ಒದಗಿಸಲು, ಹೋಮ್ ಐಸೋಲೇಷನ್ ಬದಲು ಸೋಂಕಿತರನ್ನು ಕೇರ್ ಸೆಂಟರ್ ಗೆ ಸೇರಿಸುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬ್ಲಾಕ್ ಫಂಗಸ್ ಗೆ ಈಗಾಗಲೇ ಚಿಕಿತ್ಸೆ ಆರಂಭಿಸಲಾಗಿದೆ. ಬ್ಲಾಕ್ ಫಂಗಸ್ ಹೊಸ ಕಾಯಿಲೆ ಅಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. ಯಾವುದೇ ರೀತಿಯ ಔಷಧಿಯ ಕೊರತೆ ಆಗುವುದಿಲ್ಲ. ಜಿಲ್ಲಾ ಉಸ್ತುವಾರಿ ಗಳು, ಡಿಸಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮೇ 24 ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಮುಂದುವರೆಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇನ್ನು ಎರಡು ಮೂರು ದಿನದಲ್ಲಿ ಲಾಕ್ ಡೌನ್ ವಿಸ್ತರಣೆ, ಪ್ಯಾಕೇಜ್ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.