ಅಯೋಧ್ಯೆ: ಡಬಲ್ ಬ್ಯಾರಲ್ ಗನ್ ಸ್ವಚ್ಛಗೊಳಿಸುತ್ತಿದ್ದಾಗ ದುರಂತವೊಂದು ಸಂಭವಿಸಿದೆ. ಆಕಸ್ಮಿಕವಾಗಿ ಹಾರಿದ ಗುಂಡೇಟಿಗೆ ಕಾನ್ಸ್ ಟೇಬಲ್ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಭವಿಸಿದೆ.
ಅಯೋಧ್ಯೆ ರಾಮಜನ್ಮಭೂಮಿ ಸಂಕಿರ್ಣದ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಪಿಎಸಿ ಕಾನ್ಸ್ ಟೇಬಲ್ ಗುಂಡೇಟಿಗೆ ಮೃತಪಟ್ಟಿದ್ದಾರೆ. ರಾಮಜನ್ಮಭೂಮಿ ಕಾಂಪ್ಲೆಕ್ಸ್ ಗೆ ಹೊಂದಿಕೊಂಡಿರುವ ವೇದಮಂದಿರದ ಬಳಿಯ ಕ್ರಾಸಿಂಗ್ ಅರಣ್ಯದ ಬಳಿ ಪಿಎಸಿ ಕಾನ್ಸ್ ಟೇಬಲ್ ಕುಲದೀಪ್ ಕುಮಾರ್ ತ್ರಿಪಾಠಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಳೆಯಿಂದಾಗಿ ಅವರ ಡಬಲ್ ಬ್ಯಾರಲ್ ಗನ್ ಗೆ ನೀರು ಸೇರಿಕೊಂಡಿತ್ತು. ಗನ್ ಬ್ಯಾರಲ್ ಸ್ವಚ್ಛಗೊಳಿಸುತ್ತಿದ್ದಾಗ ಏಕಾಏಕಿ ಗುಂಡು ಹಾರಿ ಅವರ ಕುತ್ತಿಗೆಗೆ ತಗುಲಿದೆ. ಇತರ ಸಿಬ್ಬಂದಿಗಳು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 30 ವರ್ಷದ ಕಾನ್ಸ್ ಟೇಬಲ್ ಮೃತಪಟ್ಟಿದ್ದಾರೆ. ಈ ಕುರಿತು ಭದ್ರತಾ ವಿಭಾಗದ ಎಸ್ ಪಿ ಪಂಕಜ್ ಪಾಂಡೆ ಮಾಹಿತಿ ನೀಡಿದ್ದಾರೆ.