ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ತಂದು ನಿಲ್ಲಿಸಿರುವ ಸರ್ಕಾರ ಪ್ರಯಾಣದರ ಹೆಚ್ಚಳಕ್ಕೂ ಚಿಂತನೆ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿಗಳ ಮಾರಾಟಕ್ಕೆ ಮುಂದಾಗಿದ್ದು, ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆಗೆ 3650 ಕೋಟಿ ರೂ. ಹೊರೆಯಾಗುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಶೇಕಡ 15ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಸಭೆ ನಿರ್ಧರಿಸಿದ್ದು, ಅದರಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ ಅಂತ್ಯಕ್ಕೆ ಸರ್ಕಾರವು ಸಾರಿಗೆ ಇಲಾಖೆಗೆ 7401 ಕೋಟಿ ರೂ. ನೀಡಬೇಕಿದೆ. ಶಕ್ತಿ ಯೋಜನೆಡಿಯ 2023-24ನೇ ಸಾಲಿನ ಬಾಕಿ 1180 ಕೋಟಿ ರೂ.ನಷ್ಟು ಇದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ 607 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಒಟ್ಟು 1787 ಕೋಟಿ ರೂ. ಬಾಕಿ ಇದೆ ಎಂದು ಹೇಳಿದ್ದಾರೆ.