ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೋನಾ ಸೋಂಕಿತರು ಮೃತಪಟ್ಟ ಘಟನೆ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ತಪ್ಪಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಉಪ ವಿಭಾಗದ ಪೊಲೀಸರು ಸಾಹಸ ಮಾಡಿ 300 ಜನರ ಜೀವ ಕಾಪಾಡಿದ್ದಾರೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ 300 ಮಂದಿ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಮಂಗಳವಾರ ರಾತ್ರಿ ಆಕ್ಸಿಜನ್ ಕಡಿಮೆಯಾಗಿ ಪಡೆಯಲು ಆಸ್ಪತ್ರೆ ವಾಹನ ಹೊಸಕೋಟೆ ಪಿಲ್ಲಗುಂಪೆಗೆ ತೆರಳಿದ್ದು, ಕೇರಳದಿಂದ ಬರಬೇಕಿದ್ದ ಆಕ್ಸಿಜನ್ ಲೋಡ್ ವಿಳಂಬವಾದ ಕಾರಣ ರಾತ್ರಿ 9.30 ಕ್ಕೆ ಬಂದಿತ್ತು.
ಆಗ ಆಸ್ಪತ್ರೆಯ ವಾಹನಕ್ಕೆ ಆಕ್ಸಿಜನ್ ತುಂಬಿಸುವ ಕಾರ್ಯ ನಡೆಯಲಿಲ್ಲ. ಇದರಿಂದಾಗಿ ಆತಂಕ ಹೆಚ್ಚಾಗಿ ಆಸ್ಪತ್ರೆಯವರು ಆಕ್ಸಿಜನ್ ಘಟಕದ ಅವರಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ಗ್ರಾಮಾಂತರ ಡಿಸಿ ಶ್ರೀನಿವಾಸ್ ಮತ್ತು ಪೊಲೀಸ್ ಅಧೀಕ್ಷಕ ರವಿ ಡಿ. ಚೆನ್ನಣ್ಣನವರ್ ಅವರ ಗಮನಕ್ಕೆ ಈ ವಿಷಯ ತರಲಾಗಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಎಸ್ಪಿ ರವಿ ಚನ್ನಣ್ಣನವರ್ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಗೆ ಸೂಚನೆ ನೀಡಿದ್ದು, ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಆಕ್ಸಿಜನ್ ಪ್ಲಾಂಟ್ ಗೆ ತೆರಳಿದ ಪೊಲೀಸರು ಆಸ್ಪತ್ರೆಯ ವಾಹನಕ್ಕೆ ಆಕ್ಸಿಜನ್ ಲೋಡ್ ಮಾಡಿಸಿದ್ದಲ್ಲದೇ ಸಕಾಲಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದ್ದಾರೆ. ತಡರಾತ್ರಿ 1.30 ರ ವೇಳೆಗೆ ಆಕ್ಸಿಜನ್ ಆಸ್ಪತ್ರೆ ತಲುಪಿದ್ದು ಪೊಲೀಸರು ಮತ್ತು ಜಿಲ್ಲಾಡಳಿತದ ಸಮಯಪ್ರಜ್ಞೆಯಿಂದ 300 ಜನರ ಜೀವ ಉಳಿದಿದೆ. ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.