ಕೊರೊನಾ ಹೊಸ ರೂಪಾಂತರದ ಬಗ್ಗೆ ಆಕ್ಸ್‌ಫರ್ಡ್ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ. ಆಕ್ಸ್‌ಫರ್ಡ್/ಆಸ್ಟ್ರಾಜೆನೆಕಾ ಆಂಟಿ-ಕೋವಿಡ್ ಲಸಿಕೆಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿ,ಮುಂದಿನ ವೈರಸ್ ಹೆಚ್ಚು ಮಾರಕ ಮತ್ತು ಹೆಚ್ಚು ಸಾಂಕ್ರಾಮಿಕವಾಗಬಹುದು ಎಂದು ಎಚ್ಚರಿಸಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನ ಲಸಿಕೆ ವಿಜ್ಞಾನದ ಪ್ರಾಧ್ಯಾಪಕರಾದ ಸಾರಾ ಗಿಲ್ಬರ್ಟ್, ಕೊರೊನಾ ನಿಯಂತ್ರಣಕ್ಕೆ ಈವರೆಗೆ ಮಾಡಿದ ಕೆಲಸ ವ್ಯರ್ಥವಾಗಬಹುದು. ಮುಂದಿನ ರೂಪಾಂತರ ತಡೆಯಲು ಹೆಚ್ಚಿನ ಹಣ ಹಾಗೂ ತಯಾರಿಯ ಅವಶ್ಯಕತೆ ಇದೆ ಎಂದಿದ್ದಾರೆ.
ಕೊರೊನಾ ವೈರಸ್‌ನ ರೂಪಾಂತರಿ ಒಮಿಕ್ರಾನ್ ವಿರುದ್ಧ ಹೋರಾಡಲು ಈಗಿರುವ ಲಸಿಕೆ ಕಡಿಮೆ ಪರಿಣಾಮಕಾರಿ ಎಂದು ವಿಜ್ಞಾನಿಗಳು ಗಮನಿಸಿದ್ದಾರೆ.
ವೈರಸ್ ನಮ್ಮ ಜೀವನಕ್ಕೆ ಬೆದರಿಕೆ ಹಾಕುತ್ತಿರುವುದು ಕೊನೆಯ ಬಾರಿ ಅಲ್ಲ. ಮುಂದಿನ ವೈರಸ್ ಮತ್ತಷ್ಟು ಕೆಟ್ಟದಾಗಿರಬಹುದು. ಇದು ಹೆಚ್ಚು ಸಾಂಕ್ರಾಮಿಕ, ಅಥವಾ ಹೆಚ್ಚು ಮಾರಣಾಂತಿಕ, ಅಥವಾ ಎರಡೂ ಆಗಿರಬಹುದು ಎಂದು ಗಿಲ್ಬರ್ಟ್ ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಒಮಿಕ್ರಾನ್ ಗೆ ಸಂಬಂಧಿಸಿದ 86 ಹೊಸ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಒಂದೇ ದಿನದಲ್ಲಿ 43,992 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 54 ಸಾವು ಸಂಭವಿಸಿದೆ.