ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಹಣ ಬಂದಿಲ್ಲ ಅವರು ತಕ್ಷಣ ಗ್ರಾಮ ಪಂಚಾಯತ್ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಬಹುದಾಗಿದೆ.
ಇದೀಗ ನೆಮ್ಮದಿ ಸುದ್ದಿ ಅಂದರೆ…ಇದುವರೆಗೆ ಯಾರಿಗೆ ಹಣ ಬಂದಿಲ್ಲ, ಅಂತಹವರಿಗೆ ಡಿಸೆಂಬರ್ ತಿಂಗಳೊಳಗೆ ಹಣ ಜಮಾ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಯಾರಿಗೆಲ್ಲಾ ಹಣ ಬಂದಿಲ್ಲವೋ ಅವರಿಗೆ ಡಿಸೆಂಬರ್ ಒಳಗೆ ಹಣ ಹಾಕುವ ವ್ಯವಸ್ಥೆ ಮಾಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಇದುವರೆಗೂ ಮೂರು ಕಂತಿನ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಏಕಕಾಲಕ್ಕೆ 6 ಸಾವಿರ ರೂ. ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಿಡಿಒ ನೆರವು ಪಡೆದು ಎಲ್ಲಾ ಅರ್ಹ ಪಲಾನುಭವಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮ ಅದಾಲತ್ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಯಾರ ಖಾತೆಗೆ ಹಣ ವರ್ಗಾವಣೆ ಆಗಿಲ್ಲವೋ ಅಂತವರ ಹೆಸರುಗಳನ್ನು ಸಂಗ್ರಹಿಸಬೇಕು, ಆ ಲಿಸ್ಟ್ ಅನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕುಟುಂಬದ ಮೊದಲ ಯಜಮಾನ ಅಲ್ಲದೇ ಇದ್ದರೆ ಎರಡನೆಯ ಸದಸ್ಯರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ರೇಷನ್ ಕಾರ್ಡ್ ಆಧಾರದ ಮೇಲೆ ಮನೆಯ ಹಿರಿಯ ವ್ಯಕ್ತಿ ಯಾರೆಂದು ಗುರುತಿಸಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಇನ್ನುಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಹಣ ಹಾಕುತ್ತಾರೆ.
ಗೃಹಲಕ್ಷ್ಮಿ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್ ಆಯೋಜಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಯಜಮಾನಿಯರ ಖಾತೆಗೆ ಹಣ ಹಾಕುವ ನಿಟ್ಟಿನಲ್ಲಿ ಸರ್ಕಾರ ತೊಡಗಿದ್ದು, ಡಿಸೆಂಬರ್ ತಿಂಗಳೊಳಗೆ ಸರ್ಕಾರ ಹಣ ಜಮಾ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.