ಇತ್ತೀಚಿನ ದಿನಗಳಲ್ಲಿ ಸಾಕಿದ ನಾಯಿಗಳು ಕಚ್ಚಿದ ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಈ ವಿಚಾರದಲ್ಲಿ ಸಾಕಿದ ನಾಯಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅನ್ನೊ ಕಾನೂನು ಕೂಡಾ ಜಾರಿಯಾಗಿದ್ದಾಗಿದೆ. ಈಗ 13 ವರ್ಷದ ಹಿಂದೆ ಸಾಕಿದ ರೋಟ್ ವಿಲರ್ ನಾಯಿ ಕಚ್ಚಿದ ಕಾರಣಕ್ಕಾಗಿ ಅದರ ಮಾಲೀಕರಿಗೆ ಈಗ 3ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಮೇ 30,2010ರಂದು ಸೈರಸ್ ಹೊರಸ್ಮುಂಜಿ ಮತ್ತು ಕೆರ್ಸಿ ಇರಾನಿ ಇವರಿಬ್ಬರೂ ಆಸ್ತಿವಿಚಾರವಾಗಿ ಮಾತನಾಡುವುದಕ್ಕಾಗಿ ಮುಂಬೈನ ನೇಪಿಯನ್ ಸೀ ರೋಡ್ ನಲ್ಲಿ ಭೇಟಿಯಾಗಿದ್ದರು. ಅದು ಸುಮಾರು ಸಂಜೆಯ 5.30-6 ಗಂಟೆ ಸಮಯ, ಸೈರಸ್ ಹೊರಸ್ಮುಂಜಿಯವರು ಬರುವಾಗ ತಮ್ಮ ಕಾರಿನಲ್ಲಿ ರೋಟ್‌ವೀಲರ್ ತಳಿಯ ಶ್ವಾನವನ್ನ ತಂದಿದ್ದರು.
ಸೈರಸ್ ಕಾರಿನ ಬಾಗಿಲು ತೆರೆಯುತ್ತಿದ್ದಂತೆ ರೋಟ್ ವೀಲರ್ ತಳಿಯ ಶ್ವಾನ ಇರಾನಿ ಮೇಲೆ ದಾಳಿ ಮಾಡಿದೆ. ಆ ನಾಯಿ ಕೈ-ಕಾಲನ್ನ ಕಚ್ಚಿ 72 ವರ್ಷದ ಇರಾನಿಯವರನ್ನ ಗಂಭೀರವಾಗಿ ಗಾಯಗೊಳಿಸಿತ್ತು.
ಈ ಘಟನೆ ನಡೆದು ಈಗಾಗಲೇ 13 ವರ್ಷಗಳೇ ಕಳೆದಿವೆ. ಆದರೂ ಈಗ ಸಾಕ್ಷಿಗಳು ಮತ್ತು ಪುರಾವೆಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮ್ಯಾಜಿಸ್ಟ್ರೇಟ್ ನದೀಮ್ ಪಟೇಲ್ ಅವರು, ” ಸಾಕು ಪ್ರಾಣಿಯ ಸ್ವಭಾವ ಗೊತ್ತಿದ್ದರೂ ನಿರ್ಲಕ್ಷ ತಾಳಿದ್ದು ಸೈರಸ್ ತಪ್ಪು ಎಂದು ಹೇಳಿದ್ದಾರೆ.
ಸಾಕು ಪ್ರಾಣಿಗಳು ಆಕ್ರಮಣದ ಮಾಡುವುದನ್ನ ತಡೆಯುವುದು ಮಾಲೀಕರ ಜವಾಬ್ದಾರಿ ಆಗಿರುತ್ತೆ ಎಂದು ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಸೈರಸ್ ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ 3 ತಿಂಗಳ ಜೈಲು ಶಿಕ್ಷೆ ಘೋಷಿಸಲಾಗಿದೆ. ಈಗಾಗಲೇ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.