ನೋಯ್ಡಾ: ಗ್ರೇಟರ್ ನೋಯ್ಡಾದ ಟೆಕ್ಝೋನ್ 4ರಲ್ಲಿನ ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ಆರು ವರ್ಷದ ಬಾಲಕನಿಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾ ಪ್ರಾಧಿಕಾರವು ಮೊದಲ ಬಾರಿಗೆ ನಾಯಿ ಮಾಲೀಕನಿಗೆ 10,000 ರೂಪಾಯಿಗಳ ದಂಡವನ್ನು ವಿಧಿಸಿದೆ.
ಏಳು ದಿನಗಳಲ್ಲಿ ದಂಡವನ್ನು ಠೇವಣಿ ಮಾಡುವಂತೆ ಸೂಚಿಸಲಾಗಿದೆ ಮತ್ತು ಗಾಯಗೊಂಡ ಮಗುವಿನ ಚಿಕಿತ್ಸೆಗೆ ಹಣವನ್ನು ನೀಡುವಂತೆ ಆದೇಶ ಹೊರಡಿಸಲಾಗಿದೆ.
ಭಾರತೀಯ ಸಾಕುಪ್ರಾಣಿ ಹಿತರಕ್ಷಣಾ ಮಂಡಳಿ ಮಾರ್ಗಸೂಚಿಯಂತೆ ಸಾಕು ನಾಯಿ ದಾಳಿ ಮಾಡಿದರೆ ಮಾಲೀಕನಿಗೆ 10 ಸಾವಿರ ರೂ. ದಂಡ ವಿಧಿಸುವ ನಿರ್ಧಾರವನ್ನು ನೋಯ್ಡಾ ಪ್ರಾಧಿಕಾರ ಕಳೆದ ವಾರ ತೆಗೆದುಕೊಂಡಿದ್ದು ಇದರ ಅಡಿ ಇದು ಮೊದಲ ಕೇಸ್ ಆಗಿದೆ.
ಇತ್ತೀಚಿನ ಮಾರ್ಗಸೂಚಿಯಂತೆ ಮುಂದಿನ ವರ್ಷ ಜ.31ರ ಒಳಗೆ ಮಾಲೀಕರು ತಮ್ಮ ಸಾಕು ಪ್ರಾಣಿ ನೋಂದಣಿಗೊಳಿಸುವುದನ್ನು ಪ್ರಾಧಿಕಾರ ಕಡ್ಡಾಯಗೊಳಿಸಿದೆ. ನಾಯಿ/ಬೆಕ್ಕಿನಿಂದ ಯಾರಿಗಾದರೂ ಹಾನಿಯಾದರೆ, ಗಾಯಗೊಂಡ ವ್ಯಕ್ತಿ ಅಥವಾ ಪ್ರಾಣಿಯ ಚಿಕಿತ್ಸೆಯ ವೆಚ್ಚವನ್ನು ಸಾಕುಪ್ರಾಣಿಯ ಮಾಲೀಕರು ಭರಿಸಬೇಕು. ಜೊತೆಗೆ ಮಾ.1, 2023ರಿಂದ 10 ಸಾವಿರ ರೂ. ದಂಡವನ್ನು ಪಾವತಿಸಬೇಕು ಎಂದು ಹೊಸ ನಿಯಮಕ್ಕೆ ಪ್ರಾಧಿಕಾರ ಅಂಗೀಕಾರ ನೀಡಿದೆ.
ನಾಯಿಗೆ ರೇಬಿಸ್ ಇಂಜಕ್ಷನ್ ಕಡ್ಡಾಯ. ಇಲ್ಲವಾದಲ್ಲಿ ಪ್ರತಿ ತಿಂಗಳು 2000 ರೂ. ದಂಡ ಪಾವತಿಸಬೇಕು. ಪ್ರಾಧಿಕಾರದ 207ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.