
ಕೈನಲ್ಲಿ ಹಣವಿದ್ರೆ ಖರ್ಚಾಗೋದು ತಿಳಿಯೋದಿಲ್ಲ. ನಾವು ನಾನಾ ವಿಧದಲ್ಲಿ ಹಣ ಖಾಲಿ ಮಾಡ್ತೇವೆಯೇ ವಿನಃ ಉಳಿತಾಯದ ಬಗ್ಗೆ ಆಲೋಚನೆ ಮಾಡೋದಿಲ್ಲ. ಒಂದ್ಕಡೆ ಗಳಿಕೆ ಆಗ್ತಿದ್ದು ಇನ್ನೊಂದು ಕಡೆ ಖರ್ಚಾಗ್ತಿದ್ದರೆ ಅದು ಒಳ್ಳೆ ಬೆಳವಣಿಗೆ ಅಲ್ಲ. ನೀವು ಎಷ್ಟು ಗಳಿಸ್ತಿರಿ ಅದ್ರಲ್ಲಿ ಅರ್ಧದಷ್ಟು ಹಣವನ್ನು ಉಳಿಸಲು ಶುರು ಮಾಡ್ಬೇಕು. ಜನರು ನಾನಾ ಕಾರಣಕ್ಕೆ ಹಣ ಖಾಲಿ ಮಾಡ್ತಾರೆ.
ಕೆಲವರು ಖರೀದಿ ವಿಷ್ಯದಲ್ಲಿ ಭಾವನಾತ್ಮಕತೆ ಹೊಂದಿರ್ತಾರೆ. ಬೇಜಾರಾದಾಗ ಶಾಪಿಂಗ್ ಗೆ ಹೋಗೋರನ್ನು ನೀವು ನೋಡಿರಬಹುದು. ಕೆಲವರು ಅತ್ಯಂತ ಖುಷಿಯಾದಾಗ ಹೋಗ್ತಾರೆ. ಟೈಂ ಪಾಸ್ ಆಗ್ತಿಲ್ಲ ಎನ್ನುವ ಸಮಯದಲ್ಲಿ ಶಾಪಿಂಗ್ ಮಾಡುವವರಿದ್ದಾರೆ. ನೀವು ಆ ಕೆಟಗರಿಯಲ್ಲಿ ಬರುವವರಾಗಿದ್ದರೆ ಇಂದೇ ಈ ಅಭ್ಯಾಸ ಬಿಡಿ. ಶಾಪಿಂಗ್ ಮಾಡುವ ಸಮಯದಲ್ಲಿ ಅದನ್ನು ಭಾವನಾತ್ಮಕವಾಗಿ ನೋಡ್ಬೇಡಿ.
ನಿಮ್ಮ ದುಡಿಮೆ, ನಿಮ್ಮ ಖರ್ಚು. ಆದ್ರೆ ಎಲ್ಲಿ ಖರ್ಚು ಮಾಡಿದ್ದೀರಿ ಎಂಬ ಲೆಕ್ಕವಿದ್ದಾಗ ನಿಮ್ಮ ಖರ್ಚಿಗೆ ಕಡಿವಾಣ ಬೀಳುತ್ತದೆ. ಪ್ರತಿ ದಿನ ಹಾಲಿಗೆ ಮಾಡಿದ ಖರ್ಚನ್ನು ಕೂಡ ಬರೆದಿಡುತ್ತ ಬನ್ನಿ. ವಾರಾಂತ್ಯದಲ್ಲಿ ಅದನ್ನು ಪರಿಶೀಲಿಸಿ.
ಹಣ ನಿಮಗೆ ಪಾಲಕರಿಂದ ಬರಲಿ ಇಲ್ಲ ನೀವೇ ಸಂಪಾದನೆ ಮಾಡಿ. ಈ ಹಣವನ್ನು ಹೇಗೆ ಖರ್ಚು ಮಾಡ್ಬೇಕು ಎಂದು ಬಜೆಟ್ ಮಾಡಿ. ತಿಂಗಳಲ್ಲಿ ಎಷ್ಟು ಹಣವನ್ನು ಖರ್ಚು ಮಾಡ್ಬೇಕು ಎಂಬ ಪಟ್ಟಿ ಮಾಡಿ. ಆ ಬಜೆಟ್ ಪಾಲನೆ ಮಾಡಿ.
ಹಬ್ಬಗಳು ಬಂದಾಗ ಇ ಕಾಮರ್ಸ್ ಕಂಪನಿಗಳು ಆಫರ್ ನೀಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜಾಹೀರಾತು ಬರುತ್ತದೆ. ಇವೆಲ್ಲ ನಿಮಗೆ ಅರಿವಿಲ್ಲದೆ ನಿಮ್ಮ ಖರೀದಿ ಉತ್ಸಾಹ ಹೆಚ್ಚಿಸುತ್ತದೆ. ಅಗತ್ಯವಿಲ್ಲದೆ ಹೋದ್ರೂ ಕಡಿಮೆ ಎನ್ನುವ ಕಾರಣಕ್ಕೆ ನೀವು ಖರೀದಿ ಶುರು ಮಾಡುತ್ತೀರಿ. ಇ ಕಾಮರ್ಸ್ ವೆಬ್ಸೈಟ್ ಚೆಕ್ ಮಾಡೋದನ್ನು ಕಡಿಮೆ ಮಾಡಿದ್ರೆ ಖರೀದಿ ಖರ್ಚು ಕಡಿಮೆ ಆಗುತ್ತದೆ.
ಹೂಡಿಕೆ ಅಭ್ಯಾಸ ಮಾಡಿಕೊಳ್ಳಿ. ಸುರಕ್ಷಿತ ಸ್ಥಳದಲ್ಲಿ ಸಣ್ಣ ಮೊತ್ತವನ್ನು ಹೂಡುತ್ತ ಬನ್ನಿ.