ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ ಸ್ನೇಹಿತರೊಂದಿಗೆ ಮುಂಬೈಗೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು.
ಇವರುಗಳು ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅತ್ಯಂತ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರುವ ಈ ಕಾರು ಅದು ಹೇಗೆ ಭೀಕರ ಅಪಘಾತಕ್ಕೆ ತುತ್ತಾಯಿತು ಎಂಬುದರ ಕುರಿತು ಮರ್ಸಿಡಿಸ್ ಬೆಂಜ್ ಕಂಪನಿ ತನಿಖೆ ಆರಂಭಿಸಿದೆ.
ಇದರ ಮಧ್ಯೆ ಈ ಅಪಘಾತಕ್ಕೆ ಅತಿ ವೇಗದ ಚಾಲನೆ ಕಾರಣ ಎಂಬ ಪ್ರಾಥಮಿಕ ಮಾಹಿತಿ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದ್ದು, ಜೊತೆಗೆ ಸೈರಸ್ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಂಗೀರ್ ಅವರ ಸಾವಿಗೆ ಹಿಂಬದಿ ಕುಳಿತಿದ್ದ ಇವರುಗಳು ಸೀಟ್ ಬೆಲ್ಟ್ ಹಾಕದೆ ಇರುವುದೇ ಕಾರಣ ಎಂದು ಹೇಳಲಾಗಿತ್ತು.
ಇದರ ಮಧ್ಯೆ ಈಗ ಮತ್ತೊಂದು ಸಂಗತಿ ತಿಳಿದು ಬಂದಿದ್ದು, ಭೀಕರ ಅಪಘಾತಕ್ಕೆ ಈಡಾದ ಈ ಮರ್ಸಿಡಿಸ್ ಬೆಂಜ್ ಕಾರು ಈ ಹಿಂದೆಯೂ ಹಲವು ಬಾರಿ ಸಿಗ್ನಲ್ ಜಂಪ್ ಹಾಗೂ ಅತಿ ವೇಗದ ಮೂಲಕ ಸಂಚಾರ ನಿಯಮ ಉಲ್ಲಂಸಿರುವುದು ಸಹ ತನಿಖೆ ವೇಳೆ ಬೆಳಕಿಗೆ ಬಂದಿದೆ.