ಅಹಮದಾಬಾದ್: ವಿಶ್ವದ ಅತಿ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಂದ ಸಂಗ್ರಹಿಸಲಾದ 5 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿ ನೌಕರರ ವಿರುದ್ಧ ಕೆವಾಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗುಜರಾತ್ ನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಜನ ಬರುತ್ತಾರೆ. ಕಳೆದ ಒಂದೂವರೆ ವರ್ಷದಲ್ಲಿ ಪ್ರವಾಸಿಗರಿಂದ 5.24 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಹಣವನ್ನು ಏಜೆನ್ಸಿ ಸಿಬ್ಬಂದಿ ಆಡಳಿತ ಮಂಡಳಿಯ ಖಾತೆಗೆ ಜಮಾ ಮಾಡಿಲ್ಲ.
ವಡೋದರಾದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಆಡಳಿತ ಮಂಡಳಿಯ ಖಾತೆಗೆ ಹಣವನ್ನು ಸಂದಾಯ ಮಾಡಬೇಕಿತ್ತು. ಆದರೆ, ಸಂದಾಯ ಮಾಡದ ಕಾರಣ ಏಜೆನ್ಸಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2018 ರ ಅಕ್ಟೋಬರ್ ನಲ್ಲಿ ಉದ್ಘಾಟನೆಯಾದ ಈ ಪ್ರತಿಮೆ ಪ್ರವಾಸಿ ತಾಣವಾಗಿದ್ದು, ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ.