ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ ಮಾರ್ಚ್ ವರೆಗೆ 1 ಕೋಟಿ 22 ಲಕ್ಷ ಮನೆಗಳು ಮಂಜೂರಾಗಿವೆ ಎಂದು ಸರ್ಕಾರ ತಿಳಿಸಿದೆ.
ನಗರ ವಸತಿ ಮಿಷನ್ ಅಡಿಯಲ್ಲಿ ಈ ವರ್ಷದ ಮಾರ್ಚ್ ವರೆಗೆ 1.22 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ವಿವಿಧ ರಾಜ್ಯಗಳಲ್ಲಿ 61 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದ್ದು, ಉಳಿದವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ವಸತಿ ರಹಿತರು ಸೇರಿದಂತೆ ಎಲ್ಲಾ ಅರ್ಹ ನಗರ ಫಲಾನುಭವಿಗಳಿಗೆ ಸರ್ವಋತು ಪಕ್ಕಾ ಮನೆಗಳನ್ನು ಒದಗಿಸಲು ಕೇಂದ್ರದ ಸಹಾಯವನ್ನು ವಿಸ್ತರಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 41 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ವಸತಿ ಯೋಜನೆಗಳಿಗಾಗಿ ಆರು ಸುಧಾರಿತ ಮತ್ತು ಇತ್ತೀಚಿನ ಕಟ್ಟಡ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.