ಇ-ಶ್ರಮ್ ಪೋರ್ಟಲ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ತಿಂಗಳಲ್ಲಿ ಇ-ಶ್ರಮ್ ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಸಂಖ್ಯೆ 5 ಕೋಟಿ ದಾಟಿದೆ. ಅಂಕಿಅಂಶಗಳ ಪ್ರಕಾರ, ಕಾರ್ಮಿಕ ಪೋರ್ಟಲ್‌ನಲ್ಲಿ ಮಂಗಳವಾರ ನೋಂದಣಿ 5.72 ಕೋಟಿ ತಲುಪಿದೆ.
ನೋಂದಾಯಿತ ಕಾರ್ಮಿಕರಲ್ಲಿ ಶೇಕಡಾ 50.94ರಷ್ಟು ಫಲಾನುಭವಿಗಳು ಮಹಿಳೆಯರು ಮತ್ತು ಶೇಕಡಾ 49.55ರಷ್ಟು ಫಲಾನುಭವಿಗಳು ಪುರುಷರು. ಸುಮಾರು 65.62 ರಷ್ಟು ನೋಂದಾಯಿತ ಕಾರ್ಮಿಕರು 16 ರಿಂದ 40 ವರ್ಷ ವಯಸ್ಸಿನವರು ಎಂದು ವರದಿ ಮಾಡಲಾಗಿದೆ.
ಕೇಂದ್ರ ಸರ್ಕಾರವು ಈ ಪೋರ್ಟಲ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸುತ್ತಿದೆ. ಇದರ ಅಡಿಯಲ್ಲಿ 12 ಅಂಕೆಗಳ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಡೇಟಾಬೇಸ್ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ನೀಡಲು ಸರ್ಕಾರ ಮುಂದಾಗಿದೆ.
ಇ-ಶ್ರಮ್ ಪೋರ್ಟಲ್‌ನಲ್ಲಿ, ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಅಸಂಘಟಿತ ವಲಯದಲ್ಲಿರುವವರು ಹೆಸರು ನೋಂದಾಯಿಸಿಕೊಳ್ಳಬಹುದು. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತ ಉದ್ಯೋಗಿ ಅಪಘಾತಕ್ಕೀಡಾದ್ರೆ, ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ್ರೆ 2 ಲಕ್ಷ ರೂಪಾಯಿ ಧನ ಸಹಾಯ ಸಿಗಲಿದೆ. ಭಾಗಶಃ ಅಂಗವೈಕಲ್ಯಕ್ಕೊಳಗಾದ್ರೆ 1 ಲಕ್ಷ ರೂಪಾಯಿ ಸಿಗಲಿದೆ.
ಆನ್‌ಲೈನ್, ಆಫ್ಲೈನ್ ಎರಡರಲ್ಲೂ ಹೆಸರು ನೋಂದಾಯಿಸಿಕೊಳ್ಳಬಹುದು. ಇ-ಶ್ರಮ್‌ನ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಬೇಕಾಗುತ್ತದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ನೋಂದಣಿ ಮಾಡಲಾಗುತ್ತದೆ. ಅಂಚೆ ಇಲಾಖೆಯ ಡಿಜಿಟಲ್ ಸೇವಾ ಕೇಂದ್ರಗಳ ಆಯ್ದ ಅಂಚೆ ಕಚೇರಿಗಳಲ್ಲೂ ಸೌಲಭ್ಯವಿದೆ. ಹೆಸರು ನೋಂದಣಿ ನಂತ್ರ ಯುನಿವರ್ಸಲ್ ಅಕೌಂಟ್ ನಂಬರ್ ಹೊಂದಿರುವ ಡಿಜಿಟಲ್ ಇ-ಶ್ರಮ್ ಕಾರ್ಡ್ ಸಿಗುತ್ತದೆ.