ಮಾಪುಟೊ: ಮೊಜಾಂಬಿಕ್ ನ ಉತ್ತರ ಕರಾವಳಿಯಲ್ಲಿ ಕಿಕ್ಕಿರಿದು ತುಂಬಿದ್ದ ತಾತ್ಕಾಲಿಕ ದೋಣಿ ಮುಳುಗಿ 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಪರಿವರ್ತಿತ ಮೀನುಗಾರಿಕಾ ದೋಣಿ ಸುಮಾರು 130 ಜನರನ್ನು ಹೊತ್ತೊಯ್ಯತ್ತಿದ್ದ ವೇಳೆ ಘಟನೆ ನಡೆದಿದೆ. ನಂಪುಲಾ ಪ್ರಾಂತ್ಯದ ದ್ವೀಪವನ್ನು ತಲುಪಲು ಪ್ರಯತ್ನಿಸುತ್ತಿರುವಾಗ ದೋಣಿ ತೊಂದರೆಗೆ ಸಿಲುಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ ಕಿಕ್ಕಿರಿದಿತ್ತು. ಭಾರಿ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸಲು ಸೂಕ್ತವಲ್ಲದ ಕಾರಣ ಅದು ಮುಳುಗಿತು. 91 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಲಿಯಾದವರಲ್ಲಿ ಅನೇಕ ಮಕ್ಕಳು ಸೇರಿದ್ದಾರೆ ಎಂದು ನಂಬುಲಾದ ರಾಜ್ಯ ಕಾರ್ಯದರ್ಶಿ ಜೈಮ್ ನೆಟೊ ಹೇಳಿದರು.
ರಕ್ಷಣಾ ತಂಡದವರು ಐದು ಜನರನ್ನು ರಕ್ಷಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸಮುದ್ರದ ಪ್ರಕ್ಷುಬ್ಧ ಪರಿಸ್ಥಿತಿಗಳು ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ. ಕಾಲರಾ ಬಗ್ಗೆ ತಪ್ಪು ಮಾಹಿತಿಯಿಂದ ಉಂಟಾದ ಭೀತಿಯಿಂದಾಗಿ ಹೆಚ್ಚಿನ ಪ್ರಯಾಣಿಕರು ಮುಖ್ಯ ಭೂಭಾಗದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟೊ ಹೇಳಿದರು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದ ದೇಶವು ಅಕ್ಟೋಬರ್‌ನಿಂದ ಸುಮಾರು 15,000 ಕಾಲರಾ ಕೇಸ್ ಗಳನ್ನು ದಾಖಲಿಸಿದೆ. 32 ಮಂದಿ ಸಾವು ಕಂಡಿದ್ದಾರೆ. ನಂಬುಲಾ ಅತ್ಯಂತ ಕೆಟ್ಟ ಪೀಡಿತ ಪ್ರದೇಶವಾಗಿದೆ, ದೋಣಿ ದುರಂತದ ಕಾರಣಗಳನ್ನು ಕಂಡುಹಿಡಿಯಲು ತನಿಖಾ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.