ನವದೆಹಲಿ: ಮಾರ್ಚ್ 1, 2021 ರ ವೇಳೆಗೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ.
ಖಾಲಿ ಇರುವ ಒಟ್ಟು 9,79,327 ಹುದ್ದೆಗಳಲ್ಲಿ ಗ್ರೂಪ್ ಎ 23,584, ಗ್ರೂಪ್ ಬಿ 1,18,801 ಮತ್ತು ಗ್ರೂಪ್ ಸಿ ವರ್ಗದ 8,36,936 ಹುದ್ದೆಗಳಿವೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಹುದ್ದೆಗಳನ್ನು ಸೃಷ್ಟಿಸುವುದು ಮತ್ತು ಭರ್ತಿ ಮಾಡುವುದು ಸಂಬಂಧಿಸಿದ ಸಚಿವಾಲಯ/ಇಲಾಖೆಯ ಜವಾಬ್ದಾರಿಯಾಗಿದೆ ಮತ್ತು ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಸಿಂಗ್ ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಅಥವಾ ಇಲಾಖೆಗಳಲ್ಲಿ, ಅಧೀನ ಕಚೇರಿಗಳಲ್ಲಿ ನಿವೃತ್ತಿ, ಬಡ್ತಿ, ರಾಜೀನಾಮೆ ಮತ್ತು ಮರಣದ ಕಾರಣದಿಂದ ಹುದ್ದೆ ಖಾಲಿಯಾಗುತ್ತವೆ. ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳು ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲು ಮಿಷನ್ ಮೋಡ್ನಲ್ಲಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.