ಸಂಸತ್ತಿನಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ 2015ರಲ್ಲಿ 1,31,489 ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. 2016ರಲ್ಲಿ ಈ ಸಂಖ್ಯೆ 1,41,603 ಹಾಗೂ 2017ರಲ್ಲಿ 1,33,049 ಮಂದಿ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ.
2018ರಲ್ಲಿ ತುಲನಾತ್ಮಕವಾಗಿ ಕಡಿಮೆ ಅಂದರೆ 85,242 ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದರೆ 2021ರಲ್ಲಿ 1,11,287 ಮಂದಿ ಭಾರತೀಯರು ಪೌರತ್ವವನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ.
2019ರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿ ಹೇಳಿದೆ.
ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಕೋಥಾ ಪ್ರಭಾಕರ್ ರೆಡ್ಡಿ ಎತ್ತಿದ ಪ್ರಶ್ನೆಗೆ ರಾಜ್ಯ ಸಚಿವ ನಿತ್ಯಾನಂದ ರೈ ಪ್ರತಿಕ್ರಿಯಿಸಿದ್ದಾರೆ.
ಭಾರತದಲ್ಲಿ ದ್ವಿಪೌರತ್ವ ಪದ್ಧತಿ ನೀಡಲಾಗುವುದಿಲ್ಲ. ಆದ್ದರಿಂದ ಬೇರೆ ದೇಶಗಳಲ್ಲಿ ಪೌರತ್ವ ಬಯಸುವವರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಲೇಬೇಕು. ಆದರೂ ಪೌರತ್ವವನ್ನು ತ್ಯಜಿಸುವ ಭಾರತೀಯರು ಭಾರತದ ಸಾಗರೋತ್ತರ ನಾಗರಿಕ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಇದು ಭಾರತದಲ್ಲಿ ವಾಸಿಸುವ ಹಾಗೂ ವ್ಯಾಪಾರವನ್ನು ನಡೆಸುವ ಪ್ರಯೋಜನವನ್ನು ನೀಡುತ್ತದೆ.
ನವೆಂಬರ್ 30ರಂದು ಮೋದಿ ಸರ್ಕಾರವು 2017 ರಿಂದ 2021ರ ಸೆಪ್ಟೆಂಬರ್ 30ರವರೆಗೆ 6 ಲಕ್ಷಕ್ಕೂ ಅಧಿಕ ಮಂದಿ ಭಾರತೀಯರು ಬೇರೆ ದೇಶಗಳಲ್ಲಿ ನೆಲೆಸಲು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸಂಸತ್ತಿಗೆ ಮಾಹಿತಿ ನೀಡಿತ್ತು.