ಭಾರತೀಯ ಪೌರತ್ವ ಬಯಸಿ ಪಾಕಿಸ್ತಾನದ 7,306 ಜನರು ಅರ್ಜಿ ಸಲ್ಲಿಸಿದ್ದು, ಭಾರತೀಯ ಪೌರತ್ವ ಬೇಕು ಎಂದವರಲ್ಲಿ ಪಾಕಿಸ್ತಾನದವರೇ ಶೇ.70ರಷ್ಟು ಜನರಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಸಂಸತ್ತಿಗೆ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು 3,117 ಜನ ವಿವಿಧ ದೇಶಗಳಲ್ಲಿನ ಪ್ರಜೆಗಳು ಭಾರತೀಯ ಪೌರತ್ವ ಪಡೆದಿದ್ದಾರೆ. 2016ರಲ್ಲಿ 1,106, 2018ರಲ್ಲಿ 628, 2017ರಲ್ಲಿ 817, 2019ರಲ್ಲಿ 987, 2020ರಲ್ಲಿ 639 ಜನ ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕ ಹಾಗೂ ಶ್ರೀಲಂಕಾದಿಂದ ತಲಾ 223, ಬಾಂಗ್ಲಾದೇಶದಿಂದ 161, ನೇಪಾಳದಿಂದ 189, ಅಫ್ಘಾನಿಸ್ತಾನದಿಂದ 1,152, ನಿರಾಶ್ರಿತರಿಂದ 428, ಚೀನಾದಿಂದ 10 ಜನ ಸೇರಿದಂತೆ ಒಟ್ಟು 10,635 ಜನರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಕಳೆದ 7 ವರ್ಷಗಳಲ್ಲಿ 8.5 ಲಕ್ಷ ಜನ ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದು, ಈ ವರ್ಷದಲ್ಲಿ 1,11,287 ಜನ ಭಾರತೀಯರು ತಮ್ಮ ಪೌರತ್ವ ಕೈ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.