ಕೊರೊನಾ ಸಾಂಕ್ರಾಮಿಕದ ಬಳಿಕ ʼವಂದೇ ಭಾರತ್ʼ ಮಿಷನ್ ಅಡಿಯಲ್ಲಿ ಆರು ಗಲ್ಫ್ ರಾಷ್ಟ್ರಗಳಿಂದ 7 ಲಕ್ಷಕ್ಕೂ ಅಧಿಕ ಕಾರ್ಮಿಕರು ಭಾರತಕ್ಕೆ ಮರಳಿದ್ದಾರೆ. ಕೋವಿಡ್ ಸೋಂಕಿನ ತೀವ್ರತೆಯು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವರಲ್ಲಿ ಅನೇಕರು ಇದೀಗ ಮತ್ತೆ ಗಲ್ಫ್ ರಾಷ್ಟ್ರಗಳಿಗೆ ತೆರಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕವು ತೀವ್ರವಾಗಿದ್ದ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದ 7,16,662 ಕಾರ್ಮಿಕರ ಪೈಕಿ 3 ಲಕ್ಷಕ್ಕೂ ಅಧಿಕ ಮಂದಿ ಯುಎಇನಿಂದ ಬಂದಿದ್ದರೆ 1.37 ಲಕ್ಷ ಮಂದಿ ಸೌದಿ ಅರೇಬಿಯಾದಿಂದ ಮರಳಿದ್ದರು ಎನ್ನಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಮುದಾಯ ಕಲ್ಯಾಣ ನಿಧಿಯನ್ನು ಬಳಕೆ ಮಾಡಿಕೊಳ್ಳುವ ಮೂಲಕ ಭಾರತೀಯ ಮಿಷನ್ಗಳಿಗೆ ಬೆಂಬಲವನ್ನು ನೀಡಲಾಗಿತ್ತು. ಈ ಬೆಂಬಲವು ವಸತಿ, ವಿಮಾನ ದರ ಹಾಗೂ ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಅನೇಕ ವೆಚ್ಚಗಳನ್ನು ಒಳಗೊಂಡಿತ್ತು ಎಂದು ಜೈಶಂಕರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಸಾಂಕ್ರಾಮಿಕ ರೋಗದ ತೀವ್ರತೆಯು ಕಡಿಮೆಯಾಗಿದ್ದು ಭಾರತೀಯ ಕಾರ್ಮಿಕರು ಇದೀಗ ಮತ್ತೆ ಗಲ್ಫ್ ದೇಶಗಳಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹೇಳಿದರು.