ಓಮಿಕ್ರಾನ್ ರೂಪಾಂತರಿಯ ಹಾವಳಿಯಿಂದ ದೇಶದಲ್ಲಿ ಕೊರೊನಾ 3ನೇ ಅಲೆಯು ರಣಕೇಕೆ ಹಾಕುತ್ತಾ ನಿತ್ಯ ಲಕ್ಷಗಟ್ಟಲೆ ಜನರಿಗೆ ಸಾಂಕ್ರಾಮಿಕ ಸೋಂಕು ತಗುಲುತ್ತಿದೆ. ಅದರಲ್ಲೂ ದೆಹಲಿ, ಕರ್ನಾಟಕ, ಕೇರಳ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೊಸ ದಾಖಲೆಯನ್ನು ನಿರ್ಮಿಸುವ ಜತೆಗೆ ಜನರ ಮನಸ್ಸಿನಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಯಾಗುವ ಭಯ ಹುಟ್ಟಿಸಿದೆ.
ಇದರ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊಸ ರಹಸ್ಯವನ್ನು ನಿಧಾನವಾಗಿ ಜನರ ಎದುರು ಬಯಲು ಮಾಡಿದೆ. ಕೊರೊನಾ ಸೋಂಕು ಮಕ್ಕಳಿಗೆ ಬಾಧಿಸುವುದಿಲ್ಲ. ಅವರಲ್ಲಿ ವೈರಾಣು ನೆಲೆಸಲು ಅಗತ್ಯವಾದ ಪ್ರೊಟೀನ್ ದೇಹದಲ್ಲಿ ಸೃಷ್ಟಿಯಾಗಿರಲ್ಲ ಎಂದು 2ನೇ ಅಲೆಯ ವೇಳೆ ಜನರಿಗೆ ಸಮಾಧಾನಪಡಿಸಿದ್ದ ಅಧಿಕಾರಿಗಳು, 50% ದೇಶದ ಮಕ್ಕಳಿಗೆ ಕೊರೊನಾ ತಗುಲಿತ್ತು ಎನ್ನುತ್ತಿದ್ದಾರೆ ಈಗ.
2020ರ ಮಾರ್ಚ್‌ನಿಂದ 2021ರ ಜೂನ್‌ವರೆಗೆ ಐಸಿಎಂಆರ್ ಅಧ್ಯಯನ ನಡೆಸಿದೆ. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಈ ವೇಳೆ 2ನೇ ಕೊರೊನಾ ಅಲೆಯು ಉತ್ತುಂಗದಲ್ಲಿತ್ತು. ಇದಕ್ಕೆ ಕಾರಣ ಡೆಲ್ಟಾ ರೂಪಾಂತರಿ ಆಗಿತ್ತು. ಈ ವೇಳೆ 18 ವರ್ಷದೊಳಗಿನ ಮಕ್ಕಳ 500 ಕ್ಕೂ ಹೆಚ್ಚು ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅವುಗಳ ದೀರ್ಘಕಾಲದ ಅಧ್ಯಯನದಿಂದಾಗಿ 13 ರಿಂದ 19 ವರ್ಷದೊಳಗಿನ 52% ಮಕ್ಕಳಿಗೆ ಕೊರೊನಾ ತಗುಲಿತ್ತು ಎನ್ನುವುದು ಖಚಿತವಾಗಿದೆ.
‘ಒಮಿಕ್ರಾನ್’ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: 25 ‘ಡೆಲ್ಟಾಕ್ರಾನ್’ ಕೇಸ್ ಪತ್ತೆ
3 ರಿಂದ 12 ವರ್ಷದೊಳಗಿನ 41% ಮಕ್ಕಳಿಗೆ ಮತ್ತು 3 ವರ್ಷದೊಳಗಿನ 7% ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ, ಇವರೆಲ್ಲರ ಪೈಕಿ 37% ಮಕ್ಕಳಿಗೆ ದೇಶಾದ್ಯಂತ ಕೊರೊನಾ ರೋಗಲಕ್ಷಣಗಳು ಮಾತ್ರ ಗೋಚರವಾಗಿರಲಿಲ್ಲ. ಜತೆಗೆ 15% ಮಕ್ಕಳು ಅನಾರೋಗ್ಯದಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಜಿನೋಮ್ ಸೀಕ್ವೆನ್ಸಿಂಗ್‌ನಲ್ಲೂ ಕೂಡ ಮಕ್ಕಳಿಗೆ ಕೊರೊನಾ ತಗುಲಿದ ಖಾತರಿ ಸಿಕ್ಕಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಚಂಡೀಗಢದಲ್ಲಿ ಮಕ್ಕಳನ್ನು ಕಪ್ಪಾ ರೂಪಾಂತರಿಯು ಬಾಧಿಸಿತ್ತು.