ನವದೆಹಲಿ: 2019 ಮತ್ತು 2021ರ ನಡುವೆ ದೇಶದಲ್ಲಿ 35,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ ಅವರು ಸಾಮಾಜಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ(ಎಸ್‌ಟಿ) ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಡೇಟಾವನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ ಸಾಮಾಜಿಕ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.
ಅಂಕಿಅಂಶಗಳ ಪ್ರಕಾರ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 2019 ರಲ್ಲಿ 10,335 ರಿಂದ 2020 ರಲ್ಲಿ 12,526 ಮತ್ತು 2021 ರಲ್ಲಿ 13,089 ಕ್ಕೆ ಏರಿದೆ.
ಸಾಮಾಜಿಕ ತಾರತಮ್ಯ ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ನಾರಾಯಣಸ್ವಾಮಿ ಮಾತನಾಡಿ, ಉನ್ನತ ಶಿಕ್ಷಣ ಇಲಾಖೆಯು ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಸೆಲ್‌ಗಳನ್ನು ಸ್ಥಾಪಿಸಿದೆ ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಕೋಶಗಳು, ಸಮಾನ ಅವಕಾಶ ಕೋಶಗಳು, ವಿದ್ಯಾರ್ಥಿಗಳ ಕುಂದುಕೊರತೆ ಕೋಶಗಳು, ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ಮತ್ತು ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ.