ಲಖ್ನೋ: ಡೆಂಗ್ಯೂ ಜ್ವರದಿಂದ ಫಿರೋಜಾಬಾದ್‌ನಲ್ಲಿ 30 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 44 ಕ್ಕೆ ಏರಿದ್ದು, ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ.
ಉತ್ತರ ಪ್ರದೇಶದ ಫಿರೋಜಾಬಾದ್ ಪ್ರದೇಶದಲ್ಲಿ 44 ಜನ ಡೆಂಗ್ಯೂವಿನಿಂದ ಸಾವನ್ನಪ್ಪಿದ್ದು, ಮೃತರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ಡೆಂಘೀ ಸಾಂಕ್ರಾಮಿಕದ ಪರಿಣಾಮವಾಗಿ ಸಾವುಗಳು ಸಂಭವಿಸಿವೆ ಎಂದು ಶಂಕಿಸಲಾಗಿದೆ, ಯೋಗಿ ಆದಿತ್ಯನಾಥ್ ಸರ್ಕಾರ ತನಿಖೆಗೆ ಮುಂದಾಗಿದೆ.
12 ದಿನಗಳ ಅವಧಿಯಲ್ಲಿ ಸಾವು ಏರಿಕೆಯಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಫಿರೋಜಾಬಾದ್‌ನ ಬಿಜೆಪಿ ಶಾಸಕ ಮನೀಶ್ ಅಸಿಜಾ ಆಗಸ್ಟ್ 31 ರಂದು ಜಿಲ್ಲೆಯಲ್ಲಿ ಶಂಕಿತ ಡೆಂಗೆಯಿಂದ ಸಾವನ್ನಪ್ಪಿದವರ ಸಂಖ್ಯೆ 44 ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 30 ರ ರಾತ್ರಿ ಮೂರು ಸಾವುಗಳು ಸಂಭವಿಸಿದ್ದು, ಮಂಗಳವಾರ ಎರಡು ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆ 44 ಕ್ಕೆ ತಲುಪಿದೆ. ಬಾಧಿತರಿಗೆ ಸರಿಯಾದ ಚಿಕಿತ್ಸೆ ನೀಡಲು 25 ಪೀಡಿತ ಸ್ಥಳಗಳಲ್ಲಿ ಶಿಬಿರ ಆಯೋಜಿಸಲಾಗಿದೆ. ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫಿರೋಜಾಬಾದ್‌ಗೆ ತೆರಳಿ, ಕೆಲವು ಶಂಕಿತ ಡೆಂಗ್ಯೂ ರೋಗಿಗಳು, ವೈದ್ಯಕೀಯ ಸಿಬ್ಬಂದಿ ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಸಾವಿಗೆ ಕಾರಣವನ್ನು ಲಖ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ತಂಡ ಮತ್ತು ಕಣ್ಗಾವಲು ತಂಡದಿಂದ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಇಲ್ಲಿಯವರೆಗೆ, 32 ಮಕ್ಕಳು ಮತ್ತು 7 ವಯಸ್ಕರು ಸಾವನ್ನಪ್ಪಿದ್ದಾರೆ. ಡೆಂಗ್ಯೂ ಜ್ವರದಿಂದ ಮೊದಲ ಸಾವು ಆಗಸ್ಟ್ 18 ರಂದು ಫಿರೋಜಾಬಾದ್‌ನಲ್ಲಿ ವರದಿಯಾಗಿದೆ ಎಂದು ಆದಿತ್ಯನಾಥ್ ದೃಢಪಡಿಸಿದರು.
ಆಗಸ್ಟ್ 29 ರಂದು, ಅಸಿಜಾ ‘ದುರಂತ’ಕ್ಕೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಯನ್ನು ದೂಷಿಸಿದ್ದರು. ಆಗಸ್ಟ್ 22-23 ರಿಂದ ಜಿಲ್ಲೆಯಲ್ಲಿ 40 ಕ್ಕೂ ಹೆಚ್ಚು ಮಕ್ಕಳು ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, 1 ರಿಂದ 8 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನು ಸೆಪ್ಟೆಂಬರ್ 6 ರವರೆಗೆ ಮುಚ್ಚುವಂತೆ ಆದೇಶಿಸಿದರು. ಶಾಲೆಗಳಲ್ಲದೆ ಕೋಚಿಂಗ್ ಸಂಸ್ಥೆಗಳೂ ಮುಚ್ಚಲು ಸೂಚಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.