ಪಾಟ್ನಾ: ಅರುಣಾಚಲಪ್ರದೇಶದಲ್ಲಿ ಜೆಡಿಯು ಪಕ್ಷದ 5 ಶಾಸಕರು ಬಿಜೆಪಿಗೆ ಸೇರಿದ ಬೆನ್ನಲ್ಲೇ ಬಿಹಾರದಲ್ಲಿ ಮಹತ್ತರ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ.
ಆಡಳಿತಾರೂಢ ಜೆಡಿಯು ಪಕ್ಷದ 17 ಶಾಸಕರು RJD ಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರ್.ಜೆ.ಡಿ. ಹಿರಿಯ ಮುಖಂಡ ಶ್ಯಾಮ್ ರಾಜಕ್ ಹೇಳಿದ್ದಾರೆ.
ಜೆಡಿಯು ಪಕ್ಷದಲ್ಲಿ ನಿತೀಶ್ ಕುಮಾರ್ ಅವರ ನಿರಂಕುಶಾಧಿಕಾರಿ ವರ್ತನೆಯಿಂದ ಬಹುಪಾಲು ಶಾಸಕರು ಕಿರಿಕಿರಿ ಅನುಭವಿಸುತ್ತಿದ್ದು, ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಅವರೆಲ್ಲ ಆರ್.ಜೆ.ಡಿ. ಸಂಪರ್ಕದಲ್ಲಿದ್ದಾರೆ ಎಂದು ಕಳೆದ ಅವಧಿಯಲ್ಲಿ ನಿತಿಶ್ ಕುಮಾರ್ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದ ಶ್ಯಾಮ್ ರಾಜಕ್ ತಿಳಿಸಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ. ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. ಅರುಣಾಚಲಪ್ರದೇಶದಲ್ಲಿ ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾದ ನಂತರ ಮಿತ್ರಪಕ್ಷಗಳ ನಡುವೆ ಅಸಮಾಧಾನ ಉಂಟಾಗಿದೆ. ಜೆಡಿಯುನ 17 ಶಾಸಕರು ಆರ್.ಜೆ.ಡಿ.ಯೊಂದಿಗೆ ಸಂಪರ್ಕದಲ್ಲಿದ್ದಾರೆ. ತಮ್ಮ ಪಕ್ಷದ ಶಾಸಕರನ್ನು ಒಟ್ಟಿಗೆ ಇಟ್ಟುಕೊಳ್ಳುವಲ್ಲಿ ನಿತಿಶ್ ಕುಮಾರ್ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.