ನವದೆಹಲಿ: ಕಳೆದ ಒಂದು ವರ್ಷದ ಅವಧಿಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯ ಇ- ಸ್ಕೂಟರ್ ಗುಣಮಟ್ಟ ಮತ್ತು ಮಾರಾಟ ಸೇವೆಯಲ್ಲಿನ ಲೋಪ ಕುರಿತಾಗಿ 10 ಸಾವಿರಕ್ಕೂ ಹೆಚ್ಚು ಗ್ರಾಹಕರು ದೂರು ನೀಡಿದ್ದಾರೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ(CCPA) 10000ಕ್ಕೂ ಅಧಿಕ ಗ್ರಾಹಕರಿಂದ ದೂರು ಸಲ್ಲಿಕೆಯಾಗಿದ್ದು, ಪ್ರಾಧಿಕಾರದಿಂದ ಓಲಾ ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಕಂಪನಿಯ ಸೇವೆಯಲ್ಲಿನ ಲೋಪಗಳ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದು, ಸಹಾಯವಾಣಿ ಮೂಲಕ ಗ್ರಾಹಕರು ನೀಡಿದ ದೂರುಗಳ ಬಗ್ಗೆ ಪ್ರಾಧಿಕಾರ ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರ ಕಂಪನಿಗೆ ನೋಟಿಸ್ ನೀಡಿದೆ. ನಂತರದಲ್ಲಿ ಈ ಸಮಸ್ಯೆ ಬಗೆಹರಿಸಲು ಕಂಪನಿ ಆಸಕ್ತಿ ತೋರಿಸಿದೆ.
ಅಲ್ಲದೇ, ಉಚಿತ ಸೇವೆಗೂ ಕಂಪನಿ ಶುಲ್ಕ ವಿಧಿಸುತ್ತಿದ್ದು, ಸಕಾಲದಲ್ಲಿ ಸೇವೆ ಒದಗಿಸುತ್ತಿಲ್ಲ. ಅಸಮರ್ಪಕ ಸೇವೆ ನೀಡಲಾಗುತ್ತಿದೆ. ವಾರಂಟಿ ಸೇವೆಗಳನ್ನು ಕೂಡ ನಿರಾಕರಿಸಲಾಗುತ್ತಿದ್ದು, ಸೇವೆಯ ನಂತರ ಸ್ಕೂಟರ್ ನಲ್ಲಿ ದೋಷಗಳು ಕಾಣಿಸಿಕೊಳ್ಳುತ್ತಿವೆ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಗ್ರಾಹಕರು ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.