ಗುವಾಹಟಿ: ಮಿಜೋರಾಂನ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಸಾಕು ಹಂದಿಗಳು ಸಾವನ್ನಪ್ಪಿವೆ. ಪ್ರಾಥಮಿಕ ಪರೀಕ್ಷೆಯಲ್ಲಿ ಆಫ್ರಿಕನ್ ಹಂದಿಜ್ವರದಿಂದ ಇಷ್ಟೊಂದು ಸಂಖ್ಯೆಯ ಹಂದಿಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.
ಈ ಪ್ರದೇಶದಲ್ಲಿ ರೋಗ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಲುಂಗ್ಲೇ ಜಿಲ್ಲೆಯ ಲುಂಗ್ ಸೆನ್ ಎಂಬಲ್ಲಿ ರೋಗ ಹರಡಿದೆ. ಮಿಜೋರಾಂ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ನಿರ್ದೇಶಕ ಡಾ. ಹಮಾರ್ಕ್ ಕುಂಗ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಂಕು ತಡೆಗಟ್ಟುವ ಕ್ರಮದ ಭಾಗವಾಗಿ ಗ್ರಾಮಗಳಿಗೆ ಹಂದಿಗಳ ಆಮದು ಮತ್ತು ರಫ್ತು ನಿರ್ಬಂಧಿಸಲಾಗಿದೆ. ತೀವ್ರ ನಿಗಾ ವಹಿಸಲಾಗಿದೆ.
ಈ ಪ್ರದೇಶ ಮಯನ್ಮಾರ್ ನೊಂದಿಗೆ ಗಡಿ ಹಂಚಿಕೊಂಡಿದೆ. ಮೃತಪಟ್ಟ ಹಂದಿಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ರಾಜ್ಯದ ಸೆಲೆಸಿಹ್‌ನ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನಾ ಕಾಲೇಜಿನಲ್ಲಿ ಮಾದರಿ ಪರೀಕ್ಷೆಯ ನಂತರ ಆಫ್ರಿಕನ್ ಹಂದಿಜ್ವರ ರೋಗ ಪತ್ತೆಯಾಗಿದೆ.
ಭೋಪಾಲ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈಸೆಕ್ಯುರಿಟಿ ಪ್ರಾಣಿಗಳ ರೋಗ ಸಂಸ್ಥೆಗೆ ಮಾದರಿಗಳನ್ನು ಕಳುಹಿಸಲಾಗಿದೆ. ಕಳೆದ ವರ್ಷ ಅಸ್ಸಾಂನಲ್ಲಿ ಸಾವಿರಾರು ದೇಶಿಯ ಹಂದಿಗಳು ಮೃತಪಟ್ಟಿದ್ದವು. ಇದೊಂದು ಕಾಯಿಲೆಯಾಗಿದ್ದು, ಮಾನವನ ಆರೋಗ್ಯಕ್ಕೆ ಅಪಾಯವಲ್ಲ, ಹಂದಿಗಳಿಂದ ಮನುಷ್ಯರಿಗೆ ಹರಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.