ದೇಶವಾಸಿಗಳೊಂದಿಗೆ ನಿಕಟತೆ ಬೆಳೆಸಿಕೊಳ್ಳಲು ತಮ್ಮ ’ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಭಾರೀ ಇಷ್ಟಪಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೂರು ಕೋಟಿಗೂ ಮೀರಿದ ಕೇಳುಗ ವರ್ಗವಿದೆ.
ಐಐಎಂ ರೋಹ್ತಕ್ ಈ ಸಂಬಂಧ ನಡೆಸಿದ ಅಧ್ಯಯನವೊಂದರಲ್ಲಿ ಈ ಕೋಟಿ ಕೋಟಿಯ ಅಂಕಿಅಂಶಗಳು ಪತ್ತೆಯಾಗಿವೆ.
ನೂರು ಕೋಟಿಗೂ ಅಧಿಕ ಮಂದಿ ’ಮನ್ ಕೀ ಬಾತ್’ಅನ್ನು ಕನಿಷ್ಠ ಒಮ್ಮೆಯಾದರೂ ಆಲಿಸಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮಕ್ಕೆ 23 ಕೋಟಿಯಷ್ಟು ನಿರಂತರ ಕೇಳುಗರು ಇದ್ದಾರೆ.
“ದೇಶವಾಸಿಗಳ ಪೈಕಿ 96 ಪ್ರತಿಶತ ಮಂದಿ ಮನ್ ಕೀ ಬಾತ್ ಬಗ್ಗೆ ತಿಳಿದಿದ್ದು, 41 ಕೋಟಿಯಷ್ಟು ಮಂದಿ ನಿರಂತರ ಕೇಳುಗರಾಗುವ ಸಾಧ್ಯತೆ ಇದೆ,” ಎಂದು ಈ ಸಮೀಕ್ಷೆ ತಿಳಿಸಿದೆ.
ಈ ಸಂಬಂಧ ತಾನು ಸರ್ವೇ ಮಾಡಿದ 10,003 ಮಂದಿಯ ಪೈಕಿ 73 ಪ್ರತಿಶತದಷ್ಟು ಜನರು ದೇಶದ ಅಭಿವೃದ್ಧಿಗೆ ಪ್ರಸಕ್ತ ಸರ್ಕಾರ ತೆಗೆದುಕೊಳ್ಳುತ್ತಿರುವ ಹೆಜ್ಜೆಗಳ ಕುರಿತು ಆತ್ಮವಿಶ್ವಾಸ ತೋರಿದ್ದಾರೆ.
ಮನ್ ಕೀ ಬಾತ್ ಕೇಳುಗ ವರ್ಗದ ಪೈಕಿ 65 %ನಷ್ಟು ಹಿಂದಿ ಹಾಗೂ 18%ನಷ್ಟು ಇಂಗ್ಲಿಷ್, 4%ನಷ್ಟು ಉರ್ದು ಹಾಗೂ ಡೋಗ್ರಿ ಮತ್ತು ತಮಿಳಿನಿಂದ ತಲಾ 2% ನಷ್ಟಿದ್ದಾರೆ.
ದೇಶದ ವೈಜ್ಞಾನಿಕ ಸಾಧನೆಗಳು, ಜನಸಾಮಾನ್ಯರ ಕಥೆಗಳು, ಸಶಸ್ತ್ರ ಪಡೆಗಳ ಸಿಬ್ಬಂದಿಯ ಸಾಹಸಗಾಥೆಗಳು, ಯುವಕರಿಗೆ ಸಂಬಂಧಿಸಿದ ವಿಚಾರಗಳು, ಪರಿಸರ ಹಾಗೂ ಸ್ವಾಭಾವಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸರಳವಾದ ಭಾಷೆಯಲ್ಲಿ ಮಾತನಾಡುವ ಮೂಲಕ ತಮ್ಮ ಅಪಾರ ಜ್ಞಾನದೊಂದಿಗೆ ದೇಶವಾಸಿಗಳಿಗೆ ಭಾವನಾತ್ಮಕವಾಗಿ ಪ್ರಧಾನಿ ಕನೆಕ್ಟ್ ಆಗಿದ್ದಾರೆ ಎಂದು ಸರ್ವೇಯಲ್ಲಿ ಭಾಗಿಯಾದ ಬಹಳಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.