ನವದೆಹಲಿ : ಮಹಿಳೆಯರನ್ನು ‘ರಾಜಕೀಯ ಶಕ್ತಿ’ ಯನ್ನಾಗಿ ರೂಪಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಹಿರಿಯ ಮಹಿಳಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ನೀಡುವ ದೃಷ್ಟಿಯಿಂದ 100ಕ್ಕೂ ಅಧಿಕ ಮಹಿಳಾ ಕಾಂಗ್ರೆಸ್ ಮುಖಂಡರನ್ನು ಇಂದು ಆಹ್ವಾನಿಸಿದ್ದೆವು, ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಪಕ್ಷಕ್ಕೆ ಮಹಿಳಾ ಕಾರ್ಯಕರ್ತರು ಅಪಾರ ಕೊಡುಗೆ ನೀಡಿದ್ದಾರೆ. ಪಕ್ಷದ ಪರವಾಗಿ ಇಂದು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಹಿಳೆಯರು ರಾಜಕೀಯ ನಾಯಕತ್ವ, ರಾಜಕೀಯ ತೊಡಗಿಸಿಕೊಳ್ಳುವಿಕೆ ಮತ್ತು ಗ್ಯಾರಂಟಿ ಯೋಜನೆಗಳಲ್ಲಿ ಕಾರ್ಯನಿರತರಾಗಬೇಕು ಹಾಗೂ ಕಾಂಗ್ರೆಸ್ ಪಕ್ಷದ ಮೂಲಕ ಸೇವೆಯನ್ನು ಮಾಡಲು ಮುಂದಾಗಬೇಕು. ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಸಭೆ ನಡೆಸಿ ಮಹಿಳೆಯರು ರಾಜಕೀಯವಾಗಿ ಭಾಗಿಯಾಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷ ಆಶಾ ಕಾರ್ಯಕರ್ತರು, ಮಹಿಳೆಯರಿಗೆ ಪಿಂಚಣಿ, ಅಂಗನವಾಡಿ ಕಾರ್ಯಕರ್ತರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವರನ್ನು ಸದೃಢರನ್ನಾಗಿ ಮಾಡಿದೆ. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಸದೃಢವಾಗಲು ಮಹಿಳೆಯರು ಶಕ್ತಿಯನ್ನು ನೀಡಬೇಕು. ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿವರೆಗೆ ಮಹಿಳಾ ಸಂಘಟನೆಗಳಿಗೆ ಮಾರ್ಗದರ್ಶನ ನೀಡಿ ಜವಾಬ್ದಾರಿಗಳನ್ನು ಹಂಚುತ್ತೇನೆ. ಅವರ ಅನುಭವ ರಾಜಕೀಯ ಶಕ್ತಿ ಪಕ್ಷಕ್ಕೆ ಉಪಯುಕ್ತವಾಗಬೇಕು. ಈ ಮೂಲಕ ಮಹಿಳೆಯರನ್ನು ರಾಜಕೀಯ ಶಕ್ತಿಯನ್ನಾಗಿ ರೂಪಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.