ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ (ಸಿಯುಇಟಿ) ಗೆ ಹಾಜರಾಗುವ ಮೊದಲು ಹಿಂದೂ ವಿದ್ಯಾರ್ಥಿಗೆ ತನ್ನ ಜನಿವಾರ ತೆಗೆಯುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಬಜಾಲಿ ಜಿಲ್ಲೆಯ ಭವಾನಿಪುರ ಅಂಚಲಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಧೃತಿರಾಜ್ ಬಸಿಸ್ತಾ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ತನ್ನ ತಾಯಿಯೊಂದಿಗೆ ಪರೀಕ್ಷೆ ಕೇಂದ್ರಕ್ಕೆ ತೆರಳಿದ್ದ.
ವರದಿಗಳ ಪ್ರಕಾರ, ಹಿಂದೂ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರದಲ್ಲಿ ಕುಳಿತುಕೊಳ್ಳಬೇಕಾದರೆ ಅವನ ಜನಿವಾರ ತೆಗೆದುಹಾಕುವಂತೆ ಸೂಚಿಸಲಾಗಿದೆ. ಈ ವಿಷಯದ ಕುರಿತು ವಿದ್ಯಾರ್ಥಿಯ ತಾಯಿ ಮಾತನಾಡುತ್ತಾ ಉನ್ನತ ಅಧಿಕಾರಿಗಳಿಗೆ ಈ ವಿಚಾರ ತಿಳಿಸಲು ನನಗೆ ಕಾಲೇಜಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದಿದ್ದಾರೆ.
ಆಕೆಯ ಪ್ರಕಾರ, ಧೃತಿರಾಜ್ ಬಸಿಸ್ತಾನನ್ನು ಭವಾನಿಪುರ ಅಂಚಲಿಕ್ ಕಾಲೇಜಿನ ಗೇಟ್‌ನಲ್ಲಿ ನಿಲ್ಲಿಸಿ ಅಧಿಕಾರಿಗಳು ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿದರು. ಈ ವೇಳೆ ಶರ್ಟ್ ಒಳಗಿದ್ದ ಜನಿವಾರ ಕಂಡು ಅದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ವಿದ್ಯಾರ್ಥಿಗೆ ಪರೀಕ್ಷೆ ಹಾಲ್ ನೊಳಗೆ ಪ್ರವೇಶಿಸಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ. ತನ್ನ ಮಗನ ಜನಿವಾರದಲ್ಲಿ ಲೋಹದ ವಸ್ತು ಪತ್ತೆಯಾಗಿದ್ದರಿಂದ ಅದನ್ನು ತೆಗೆದುಹಾಕಲು ಹೇಳಿದ್ದೇವೆಂದು ಕಾಲೇಜು ಹೇಳಿದೆ ಎಂದು ವಿದ್ಯಾರ್ಥಿಯ ತಾಯಿ ಹೇಳಿದ್ದಾರೆ.
“ಪವಿತ್ರ ಜನಿವಾರವಿಲ್ಲದೇ ಅವನು ತಿನ್ನಲು, ಮಾತನಾಡಲು ಅಥವಾ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಬ್ರಾಹ್ಮಣ ಎಂಬುದು ನಮ್ಮ ಪ್ರಾಥಮಿಕ ಗುರುತಾಗಿದೆ ಎಂದು ಮಾಧ್ಯಮಗಳ ಮುಂದೆ ಮಹಿಳೆ ಹೇಳುತ್ತಾ ತನ್ನ ಮಗನ ಕೈಯಿಂದ ಬಲವಂತವಾಗಿ ತೆಗೆಸಿಹಾಕಿದ್ದ ಜನಿವಾರವನ್ನು ಪ್ರದರ್ಶಿಸಿದರು.
ಧೃತಿರಾಜ್ ಬಸಿಸ್ತಾ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಘಟನೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಕೋಲಾಹಲ ಸೃಷ್ಟಿಸಿದೆ. ವಿಷಯ ತಿಳಿದ ಅಖಿಲ ಭಾರತ ಬ್ರಾಹ್ಮಣ ಮೋರ್ಚಾವು ಪ್ರತಿಭಟಿಸಿ ಭವಾನಿಪುರ ಅಂಚಲಿಕ್ ಕಾಲೇಜು ಆಡಳಿತದ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದೆ.
ಈ ಮಧ್ಯೆ, ಹಿಂದೂ ಹುಡುಗನ ಜನಿವಾರ ತೆಗೆದುಹಾಕುವಂತೆ ಒತ್ತಾಯಿಸುವುದನ್ನು ಕಾಲೇಜು ನಿರಾಕರಿಸಿದೆ.
ಭವಾನಿಪುರ ಅಂಚಲಿಕ್ ಕಾಲೇಜಿನ ಪ್ರಾಂಶುಪಾಲ ಮಾನಸ್ ಕುಮಾರ್ ಚಕ್ರವರ್ತಿ, ಧೃತಿರಾಜ್ ಬಸಿಸ್ತಾ ಅವರಿಗೆ ತಮ್ಮ ಜನಿವಾರಕ್ಕೆ ಜೋಡಿಸಲಾದ ಲೋಹದ ಉಂಗುರವನ್ನು ತೆಗೆದುಹಾಕಲು ಮಾತ್ರ ಕೇಳಲಾಯಿತು. ಬದಲಾಗಿ ಜನಿವಾರವನ್ನೇ ತೆಗೆದುಹಾಕಬೇಕೆಂದು ನಾವು ಹೇಳಿಲ್ಲ. ಪರೀಕ್ಷಾ ಹಾಲ್‌ನೊಳಗೆ ಯಾವುದೇ ಲೋಹದ ವಸ್ತುವನ್ನು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ಎನ್‌ಟಿಎ ಸೂಚನೆಗಳನ್ನು ನಾವು ಅನುಸರಿಸುತ್ತಿದ್ದೇವೆ.
ಸೂಚನೆಗಳ ಪ್ರಕಾರ, ನಾವು ವಿದ್ಯಾರ್ಥಿಗೆ ಅವರ ಜನಿವಾರದಲ್ಲಿನ ಉಂಗುರವನ್ನು ತೆಗೆಯುವಂತೆ ಹೇಳಿದೆವು. ಆದರೆ ಬದಲಿಗೆ ಅವರು ಜನಿವಾರ ತೆಗೆದುಹಾಕಿದರು ಮತ್ತು ಅದನ್ನು ಅವರ ತಾಯಿಗೆ ಹಸ್ತಾಂತರಿಸಿದರು’’ ಎಂದು ಆರೋಪಿಸಿದರು.