ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೀಡಲಾಗಿದ್ದ ಒನ್ ಟೈಮ್ ಸೆಟ್ಲ್ ಮೆಂಟ್ ಅವಧಿ ಶನಿವಾರ ಮುಕ್ತಾಯವಾಗಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ 3758 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಕಳೆದ ಫೆಬ್ರವರಿಯಲ್ಲಿ ಒಟಿಎಸ್ ಆರಂಭಿಸಿದ್ದು, ಮೂರು ಬಾರಿ ಅವಧಿ ವಿಸ್ತರಿಸಲಾಗಿತ್ತು. ಶನಿವಾರ ತಡರಾತ್ರಿ 12 ಗಂಟೆಗೆ ಯೋಜನೆ ಅಂತ್ಯಗೊಳಿಸಲಾಗಿದೆ. ಕೊನೆ ಕ್ಷಣದಲ್ಲಿ ಯೋಜನೆಯ ಲಾಭ ಪಡೆಯಲು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಅನೇಕರು ಶನಿವಾರ ತಡರಾತ್ರಿವರೆಗೂ ಆನ್ಲೈನ್ ಮೂಲಕ ತೆರಿಗೆ ಪಾವತಿಸಿದ್ದಾರೆ.
ಆನ್ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸಾಧ್ಯವಾಗದವರು ಬಿಬಿಎಂಪಿ ಕಂದಾಯ ವಿಭಾಗದ ಉಪಕಚೇರಿ, ವಲಯ ಕಚೇರಿಗೆ ಭೇಟಿ ನೀಡಿ ತೆರಿಗೆ ಪಾವತಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಗೆ 3758 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.
ಒಟಿಎಸ್ ಯೋಜನೆಯಡಿ ಆಸ್ತಿ ತೆರಿಗೆಯನ್ನು ಸಂಪೂರ್ಣ ಬಡ್ಡಿ ಮನ್ನಾ ಹಾಗೂ ಸಂಪೂರ್ಣ ಬಡ್ಡಿ ರಹಿತವಾಗಿ ಪ್ರತಿ ವರ್ಷಕ್ಕೆ ಕೇವಲ 100 ರೂ. ಪಾವತಿಸಿ ಆಸ್ತಿ ತೆರಿಗೆ ಕಟ್ಟಬಹುದಾಗಿತ್ತು. ಬಾಕಿ ಉಳಿಸಿಕೊಂಡವರಿಗೆ ಆಸ್ತಿ ತೆರಿಗೆಯು ಡಿಸೆಂಬರ್ 1ರಿಂದ ದುಪ್ಪಟ್ಟಿಗಿಂತ ಹೆಚ್ಚಾಗಲಿದೆ ಎಂದು ಹೇಳಲಾಗಿತ್ತು.