ಶಿವಮೊಗ್ಗ: ಕೆವೈಸಿ ಅಪ್ಡೇಟ್ ಮಾಡಬೇಕಿದೆ ಎಂದು ಒಟಿಪಿ ಪಡೆದುಕೊಂಡ ಖದೀಮರು ವ್ಯಕ್ತಿಯೊಬ್ಬರ ಖಾತೆಯಿಂದ 1.80 ಲಕ್ಷ ರೂ. ದೋಚಿದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆಯ ಚೌಡೇಶ್ವರಿ ಬೀದಿ ನಿವಾಸಿ ಜಿ.ಎಂ. ಸ್ವಾಮಿ ಹಣ ಕಳೆದುಕೊಂಡವರು ಏಪ್ರಿಲ್ 12ರಂದು ಬ್ಯಾಂಕ್ ಖಾತೆ ಸಿಬ್ಬಂದಿ ಸೋಗಿನಲ್ಲಿ ಜಿ.ಎಂ. ಸ್ವಾಮಿಯವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕಿದೆ ಕೆಲವು ಮಾಹಿತಿ ನೀಡಿ ಎಂದು ಹೇಳಿದ್ದಾನೆ. ಅಂತೆಯೇ ಜಿ.ಎಂ. ಸ್ವಾಮಿ ಅಪರಿಚಿತ ಕೇಳಿದ ಮಾಹಿತಿ ನೀಡಿದ್ದು, ಅವರ ಮೊಬೈಲ್ ಗೆ ನಾಲ್ಕೈದು ಸಲ ಬಂದ ಒಟಿಪಿ ನಂಬರ್ ನೀಡಿದ್ದಾರೆ.
ನಂತರ ಸ್ವಾಮಿಯವರ ಖಾತೆಯಿಂದ 98,500 ರೂ., 50,000 ರೂ. ಹಾಗೂ 32,600 ರೂ. ವರ್ಗಾವಣೆಯಾಗಿದೆ. ಸ್ವಲ್ಪ ಸಮಯದ ನಂತರ ಮೊಬೈಲ್ ಗೆ ಬಂದ ಮೆಸೇಜ್ ಗಮನಿಸಿದ ಸ್ವಾಮಿಯವರಿಗೆ ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಕೂಲಿ ಕಾರ್ಮಿಕರಾಗಿರುವ ಸ್ವಾಮಿ ಜಮೀನು ಖರೀದಿಸಲು ಮನೆ ಮಾರಿ ಬಂದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದರು. ಅದನ್ನೇ ಖದೀಮರು ಒಟಿಪಿ ಪಡೆದು ದೋಚಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೋಲಿಸ್ ಠಾಣೆಗೆ ಸ್ವಾಮಿ ದೂರು ನೀಡಿದ್ದು, ಅಪರಿಚಿತರೊಂದಿಗೆ ಡಿಜಿಟಲ್ ಹಣಕಾಸಿನ ವ್ಯವಹಾರದ ಮಾಹಿತಿ ಹಂಚಿಕೊಳ್ಳದಂತೆ ಪೊಲೀಸರು ಮನವಿ ಮಾಡಿದ್ದಾರೆ.