ಶಿವಮೊಗ್ಗ: ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನು ನೀಡುವ ಕೆಲಸ ಸರ್ಕಾರದ ಯೋಜನೆಗಳಿಂದ ಆಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಮಂಗಳವಾರ ಶ್ರೀ ಶಾರದಾದೇವಿ ಅಂಧರ ವಿಕಾಸ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 53 ಜನ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಇತರರಿಗಿಂತ ನಾವು ಭಿನ್ನವಾಗಿದ್ದೇವೆ ಎನ್ನುವ ಮನೋಭಾವ ವಿಕಲಚೇತನರಿಗೆ ಮೂಡಬಾರದು ಎಂದು ಸರ್ಕಾರ ವಿಕಲಚೇತನರಿಗೆ ಸಮಾಜದಲ್ಲಿ ಸಮಾನತೆಯನ್ನು ತರಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದಾದರು ಯೋಜನೆಗಳಲ್ಲಿ ಅನುದಾನದ ಕೊರತೆ ಅಥವಾ ಇನ್ನಾವುದೇ ರೀತಿಯ ತೊಂದರೆ ಉಂಟಾದರೆ ನನ್ನ ಗಮನಕ್ಕೆ ತನ್ನಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಕೆಲಸ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿರಬಾರದು ಅನುಷ್ಠಾನ ಮತ್ತು ಸೇವೆ ನೀಡುವಲ್ಲಿ ಮುಂದಾಗಬೇಕು ಎಂದರು.
ರಾಜ್ಯದ ಎಲ್ಲಾ ಅನುದಾನಿತ ವಿಕಲಚೇತನರ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ವಿಸ್ತರಿಲಾಗುವುದು. ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗುವುದು. ವಿಕಲಚೇತನ ಮಕ್ಕಳಿಗೆ ಈ ಯೋಜನೆಗಳು ತಲುಪಬೇಕಾಗಿದ್ದು, ಶಿಕ್ಷಣ ಇಲಾಖೆ ಅಡಿಯಲ್ಲಿ ಸಿಗುವ ಉಚಿತ ಸಮವಸ್ತ್ರ, ಶೂ, ಹಾಗೂ ಇನ್ನಿತರ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ವಿಕಲಚೇತನರ ಮಕ್ಕಳ ಶಾಲೆಗಳಿಗೆ ವಿಸ್ತರಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಡಿಐಆರ್‌ಟಿ ಕಾರ್ಯಕ್ರಮದ ಅಡಿ ಶಿಕ್ಷಕರು ವಿಕಲಚೇತನ ಮಕ್ಕಳ ಮನೆಗಳಿಗೆ ತೆರಳಿ ಅವರಿಗೆ ಅಗತ್ಯವಿರುವ ಸೌಲಭ್ಯ, ತರಬೇತಿ ನೀಡುವರು. ಇದನ್ನು ಅವರು ಉಪಯೋಗಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿಗಳ ಮೂಲಕ ಜೊತೆ ಸಮಾಜದಲ್ಲಿ ಸಮಾನತೆಯನ್ನು ನೀಡುವ ಅನೇಕ ಕೆಲಸವನ್ನು ಮಾಡುತ್ತಿದೆ. ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳ 53 ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಎಚ್ಚರಿಕೆ ಮಾತು ಹೇಳಿದರು.
ಈ ವೇಳೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಬ್ಲ್ಯೂ ಗಳು, ತಾವು ಅನೇಕ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಸೇವೆ ಖಾಯಂಗೊಳಿಸುವAತೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಚಂದ್ರಭೂಪಾಲ್, ಸೂಡಾ ಸದಸ್ಯ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶಶಿರೇಖಾ, ಶಾರದಾ ಅಂಧರ ವಿಕಾಸ ಶಾಲೆಯ ಮುಖ್ಯಸ್ಥ ಈಶ್ವರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.