ಬಿಹಾರದ ಪಾಟ್ನದ ಬಾಲಕಿಯೊಬ್ಬಳ ಜೀವನ ಪಯಣವು ದೇಶಾದ್ಯಂತ ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ತನ್ನ ಬಾಲ್ಯವನ್ನು ರೈಲು ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ಕಳೆದು, ಭಾರೀ ಗಟ್ಟಿಯಾದ ಮನೋಬಲ ಬೆಳೆಸಿಕೊಂಡು ಹಾಗೇ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾಳೆ. ಇದರೊಂದಿಗೆ ತನ್ನ ಅಗಾಧವಾದ ಶ್ರದ್ಧೆ ಮತ್ತು ದೃಢಸಂಕಲ್ಪದಿಂದ ಈ ಬಾಲೆ ಇಂದು ಇದೇ ಪಾಟ್ನಾದಲ್ಲಿ ಕೆಫೆಟೇರಿಯಾವನ್ನು ನಡೆಸುತ್ತಿದ್ದಾಳೆ.
ಹತ್ತೊಂಬತ್ತರ ಹರೆಯದ ಜ್ಯೋತಿಗೆ ತನ್ನ ನಿಜವಾದ ತಂದೆ-ತಾಯಿ ಯಾರೆಂದು ಇಲ್ಲಿಯವರೆಗೂ ತಿಳಿದಿಲ್ಲ. ಪಾಟ್ನಾ ರೈಲು ನಿಲ್ದಾಣದಲ್ಲಿ ಭಿಕ್ಷುಕ ದಂಪತಿಗಳಿಂದ ಅವಳು ಬಾಲ್ಯದಲ್ಲಿ ಪರಿತ್ಯಕ್ತಳಾಗಿದ್ದಾಗಿ ಈಕೆ ಹೇಳುತ್ತಾಳೆ. ತುಂಬಾ ಕಷ್ಟದ ದಿನಗಳನ್ನು ಅನುಭವಿಸಿದರೂ ಸಹ ಇದೇ ವೇಳೆ ಅನೇಕ ಸಹೃದಯಿಗಳ ಸಹಾಯದಿಂದ ಜೀವನದಲ್ಲಿ ಮುನ್ನಡೆಯುತ್ತಾ ಸಾಗಿದ್ದಾಗಿ ಈಕೆ ತಿಳಿಸಿದ್ದಾಳೆ.
ಬಾಲ್ಯದಲ್ಲಿ ತನ್ನನ್ನು ದತ್ತು ಪಡೆದ ಭಿಕ್ಷುಕ ದಂಪತಿಗಳೊಂದಿಗೆ ತಾನೂ ಕೂಡ ಭಿಕ್ಷೆ ಬೇಡಲು ಆರಂಭಿಸಿದ್ದೆ ಎನ್ನುತ್ತಾರೆ ಜ್ಯೋತಿ. ಭಿಕ್ಷಾಟನೆಯಿಂದ ಸಂಪಾದಿಸಿದ ಹಣ ತೀರಾ ಕಡಿಮೆಯಾದಾಗ ಈಕೆ ಕಸವನ್ನು ಎತ್ತಲು ಪ್ರಾರಂಭಿಸಿದಳು. ಇಷ್ಟೆಲ್ಲಾ ನೋವಿನ ನಡುವೆಯೂ ವಿದ್ಯಾಭ್ಯಾಸದಲ್ಲಿ ಮುಂದುವರೆಯುವ ಬಯಕೆ ಅವಳ ಮನಸ್ಸಿನಲ್ಲಿತ್ತು. ತನ್ನ ಇಡೀ ಬಾಲ್ಯವು ಶಿಕ್ಷಣವಿಲ್ಲದೆ ಕಳೆದುಹೋದರೂ, ಅಧ್ಯಯನವನ್ನು ಮುಂದುವರೆಸುವ ಅದಮ್ಯವಾದ ಬಯಕೆ ಅವಳ ಉತ್ಸಾಹವನ್ನು ತಡೆಯಲಿಲ್ಲ.
10 ಅಡಿಯ ಈ ದೋಸೆ ತಿಂದವರಿಗೆ 71,000 ರೂ ಬಹುಮಾನ…!
ತನ್ನ ಶೈಕ್ಷಣಿಕ ಅಧ್ಯಯನವನ್ನು ಮುಂದುವರಿಸುತ್ತಿದ್ದಂತೆ ತನ್ನನ್ನು ಬೆಳೆಸಿದ ತಾಯಿಯನ್ನು ಕಳೆದುಕೊಂಡರೂ ಸಹ ಅಪಾರ ಕಷ್ಟಗಳನ್ನು ಎದುರಿಸುತ್ತಿದ್ದರೂ ಜ್ಯೋತಿ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಪಟನಾ ಜಿಲ್ಲಾಡಳಿತವು ಸ್ವಯಂಸೇವಕ ಸಂಸ್ಥೆ ರಾಂಬೊ ಫೌಂಡೇಶನ್ ಮೂಲಕ ಉತ್ತಮ ಜೀವನವನ್ನು ನಡೆಸಲು ಸಹಾಯ ಮಾಡಲು ನಿರ್ಧರಿಸಿದಾಗ ಜೀವನದಲ್ಲಿ ಮೇಲೆ ಬರುವ ಆಕೆಯ ಕನಸಿಗೆ ರೆಕ್ಕೆ ಸಿಕ್ಕಂತಾಯಿತು.
ರಾಂಬೋ ಫೌಂಡೇಶನ್‌ನ ಬಿಹಾರದ ಮುಖ್ಯಸ್ಥೆ ವಿಶಾಖ ಕುಮಾರಿ ಮಾತನಾಡಿ, ನಮ್ಮ ಐದು ಕೇಂದ್ರಗಳಿವೆ, ಅಲ್ಲಿ ಬಡ ಮತ್ತು ಅನಾಥ ಯುವಕ-ಯುವತಿಯರನ್ನು ಇಟ್ಟುಕೊಂಡು ಶಿಕ್ಷಣ ನೀಡಲಾಗುತ್ತದೆ. ಜ್ಯೋತಿ ರಾಂಬೊ ಫೌಂಡೇಶನ್‌ಗೆ ಸೇರಿದ ನಂತರ, ಅವಳು ತನ್ನ ಅಧ್ಯಯನವನ್ನು ಮುಂದುವರಿಸಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಸಾಧಾರಣ ಅಂಕಗಳೊಂದಿಗೆ ಉತ್ತೀರ್ಣಳಾದ ಕಾರಣ ಅವಳ ಜೀವನವು ಸಂಪೂರ್ಣವಾಗಿ ಬದಲಾಯಿತು. ಇದರ ಬೆನ್ನಲ್ಲೇ ಉಪೇಂದ್ರ ಮಹಾರಥಿ ಸಂಸ್ಥೆಯಲ್ಲಿ ಮಧುಬನಿ ಚಿತ್ರಕಲೆ ತರಬೇತಿ ಪಡೆದಳು ಎಂದಿದ್ದಾರೆ.
ಆದರೆ ಜ್ಯೋತಿಗೆ ಇಷ್ಟಕ್ಕೇ ತೃಪ್ತಿಯಾಗಲಿಲ್ಲ ಮತ್ತು ತನ್ನ ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ತನ್ನ ಸಂಸ್ಥೆಯಲ್ಲಿ ಕೆಫೆಟೇರಿಯಾ ನಡೆಸುವ ಕೆಲಸವನ್ನು ಪಡೆದರು. ಅವಳು ದಿನವಿಡೀ ಕೆಫೆಟೇರಿಯಾವನ್ನು ನಡೆಸುತ್ತಾ, ತನ್ನ ಬಿಡುವಿನ ವೇಳೆಯಲ್ಲಿ ಅಧ್ಯಯನ ಮಾಡುವುದಾಗಿ ಹೇಳುತ್ತಾಳೆ. ಇಂದು ಆಕೆ ಸ್ವಂತ ಸಂಪಾದನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಜ್ಯೋತಿ ಅವರು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡುವ ಕನಸು ಹೊಂದಿದ್ದಾರೆ ಮತ್ತು ಮುಕ್ತ ಶಾಲೆಯ ಮೂಲಕ ಇನ್ನೂ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.