ಕೊರೊನಾ ದೇಶದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಮಹಾಮಾರಿ, ಅನೇಕ ಕುಟುಂಬಗಳನ್ನು ನಾಶ ಮಾಡಿದೆ. ಕೊರೊನಾದಿಂದಾಗಿ ಕೆಲ ಮಕ್ಕಳು, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇವರಿಗೆ ಉದ್ಯೋಗ ಪಿಂಚಣಿ ಯೋಜನೆ ನೆರವಾಗಲಿದೆ. ಇಪಿಎಸ್ ಅಡಿಯಲ್ಲಿ ಅನಾಥ ಮಕ್ಕಳಿಗೆ ಆರ್ಥಿಕ ಬೆಂಬಲ ಸಿಗಲಿದೆ.
ಕೊರೊನಾದಿಂದ ಸಾವನ್ನಪ್ಪಿದ್ದ ಪಾಲಕರಲ್ಲಿ ಒಬ್ಬರು ಅಥವಾ ಇಬ್ಬರೂ ನೌಕರಿಯಲ್ಲಿದ್ದು, ಇಪಿಎಸ್ ನಲ್ಲಿ ಖಾತೆ ಹೊಂದಿದ್ದರೆ, ಅವರ ಮಕ್ಕಳಿಗೆ ಆರ್ಥಿಕ ಲಾಭ ಸಿಗಲಿದೆ. ಈ ಬಗ್ಗೆ ಇಪಿಎಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಅನಾಥ ಮಕ್ಕಳಿಗೆ ನೀಡುವ ಪಿಂಚಣಿ ಮೊತ್ತವು ಮಾಸಿಕ ವಿಧವಾ ಪಿಂಚಣಿಯ ಶೇಕಡಾ 75ರಷ್ಟಿರಲಿದೆ. ಈ ಮೊತ್ತವು ತಿಂಗಳಿಗೆ ಕನಿಷ್ಠ 750 ರೂಪಾಯಿಯಾಗಿರಲಿದೆ. ಇಬ್ಬರು ಅನಾಥ ಮಕ್ಕಳಿಗೆ ತಿಂಗಳಿಗೆ ಪ್ರತ್ಯೇಕವಾಗಿ 750 ರೂಪಾಯಿ ಪಿಂಚಣಿ ಸಿಗಲಿದೆ. ಇಪಿಎಸ್ ಯೋಜನೆಯಡಿ ಅನಾಥ ಮಕ್ಕಳಿಗೆ 25 ವರ್ಷದವರೆಗೆ ಪಿಂಚಣಿ ಸಿಗಲಿದೆ. ಮಕ್ಕಳು ಯಾವುದೇ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಅವರಿಗೆ ಜೀವನ ಪರ್ಯಂತ ಪಿಂಚಣಿ ನೀಡಲಾಗುವುದು.
ಇದಕ್ಕಾಗಿ ಕಂಪನಿಯು ಉದ್ಯೋಗಿಯ ಸಂಬಳದಿಂದ ಯಾವುದೇ ಹಣ ಕಡಿತಗೊಳಿಸುವುದಿಲ್ಲ. ಕಂಪನಿಯ ಕೊಡುಗೆಯ ಕೆಲವು ಭಾಗವನ್ನು ಇಪಿಎಸ್‌ನಲ್ಲಿ ಠೇವಣಿ ಮಾಡಲಾಗುತ್ತದೆ. ಹೊಸ ನಿಯಮದ ಪ್ರಕಾರ, 15,000 ರೂಪಾಯಿವರೆಗಿನ ಮೂಲ ವೇತನ ಹೊಂದಿರುವವರು ಈ ಸೌಲಭ್ಯವನ್ನು ಪಡೆಯುತ್ತಾರೆ. 15,000 ರೂಪಾಯಿ ಮೂಲ ವೇತನವಾಗಿದ್ದರೆ ಕಂಪನಿಯು 1,250 ರೂಪಾಯಿ ಇಪಿಎಸ್‌ನಲ್ಲಿ ಠೇವಣಿ ಇಡಲಿದೆ.