ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದಷ್ಟು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಬ್ರಹ್ಮಶ್ರೀ ನಾರಾಯಣ ಗುರು ಅವರು ಪ್ರತಿಪಾದಿಸಿದಂತೆ ಎಲ್ಲರೂ ಮನುಷ್ಯರಾಗಿ ಗೌರವದಿಂದ ಬದುಕುವಂತಹ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ. ಸಮಾಜದಲ್ಲಿರುವ ಅಸಮಾನತೆಯನ್ನು ನಿವಾರಿಸಿ, ಸಾಮಾಜಿಕ ನ್ಯಾಯದ ಪರವಾದ ಸಮಾಜ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ನಾರಾಯಣ ಗುರುಗಳು ಹೇಳಿದರು. ಅದರಂತೆ ಪ್ರತಿಯೊಬ್ಬರೂ ಅನುಸರಿಸಿ ಬಾಳಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ನಾರಾಯಣ ಗುರು ಅವರು ಈಡಿಗ ಜನಾಂಗದಲ್ಲಿ ಜನಿಸಿದ್ದರೂ ಯಾವುದೇ ಒಂದು ಜಾತಿ, ಧರ್ಮ, ಭಾಷೆಗೆ ಸೀಮಿತರಾಗಿದ್ದವರಲ್ಲ. ಅವರು ಬುದ್ಧ, ಬಸವ, ಕನಕದಾಸ ರೀತಿಯ ಸಂತರು. ಸಮಾಜದಲ್ಲಿ ಸುಧಾರಣೆ ಬಯಸಿ ಅದಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಿಸಲಾಗುತ್ತಿದೆ ಎಂದರು.
ಈಡಿಗರ ಸಂಘದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ ಶಿಥಿಲವಾಗಿದ್ದು, ಅದರ ನವೀಕರಣಕ್ಕೆ ಅನುದಾನ ಒದಗಿಸಲಾಗುವುದು. ಈಡಿಗರ ಸಮುದಾಯ ಭವನಕ್ಕೂ ಅನುದಾನ ನೀಡಲಾಗುವುದು. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.