
ಬೆಂಗಳೂರು: ಈಗಾಗಲೇ ಅಗತ್ಯ ವಸ್ತು ಸೇರಿ ವಿವಿಧ ದರ ಏರಿಕೆಗಳಿಂದ ತತ್ತರಿಸಿದ ಜನಸಾಮಾನ್ಯರಿಗೆ ವಿದ್ಯುತ್ ಮೀಟರ್ ದರ 400 ರಿಂದ 800 ರಷ್ಟು ಏರಿಕೆ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ.
ಸ್ಮಾರ್ಟ್ ವಿದ್ಯುತ್ ಮೀಟರ್ ದರ ಶೇಕಡ 400 ರಿಂದ 800 ರಷ್ಟು ಏರಿಕೆಯಾಗಿದೆ. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ 950 ರೂ.ನಿಂದ, 4998 ರೂ.ಗೆ ಏರಿಕೆಯಾಗಿದೆ. ಎಸ್‌ಪಿ 2,400ನಿಂದ 9,000 ರೂ.ಗೆ ಏರಿಕೆಯಾಗಿದೆ. ತ್ರೀ ಫೇಸ್ ಮೀಟರ್ ದರ 2,500 ನಿಂದ 28,000 ರೂ.ಗೆ ಏರಿಕೆಯಾಗಿದ್ದು, ಬೆಸ್ಕಾಂ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ. ಹೊಸ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ.
ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಜನವರಿ 15 ರಿಂದ ಅನ್ವಯವಾಗುವಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದ್ದು, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಪ್ರಿಪೇಯ್ಡ್ ಮೀಟರ್ ಕಡ್ಡಾಯ ಮಾಡಲಾಗಿದೆ. ಹೊಸ ಕಾಯಂ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
ಬೆಸ್ಕಾಂನಲ್ಲಿ ಜಾರಿಗೆ ತರುತ್ತಿರುವ ದರವನ್ನೇ ರಾಜ್ಯದ ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿಯೂ ಜಾರಿ ಮಾಡಬೇಕು. ಏಕರೂಪದ ದರ ನೀತಿ ಅನ್ವಯವಾಗಬೇಕು ಎಂದು ಇತ್ತೀಚೆಗೆ ಇಂಧನ ಸಚಿವ ಕೆ.ಜೆ. ಚಾರ್ಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಎಸ್ಕಾಂಗಳಲ್ಲಿಯೂ ಸದ್ಯದಲ್ಲಿಯೇ ಸ್ಮಾರ್ಟ್ ಮೀಟರ್ ಕಡ್ಡಾಯವಾಗಲಿದೆ.
ಸ್ಮಾರ್ಟ್ ಮೀಟರ್ ನಿರ್ವಹಣೆಗೆ ಬೆಸ್ಕಾಂನಿಂದ ಮಾರ್ಗಸೂಚಿ ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರೂಪಾಯಿ ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಟ ರಿಚಾರ್ಜ್ ಗೆ ಯಾವುದೇ ಮಿತಿ ಇರುವುದಿಲ್ಲ. ಇದಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲೇ ಕಡಿತ ಮಾಡಲಾಗುವುದು. ಬ್ಯಾಲೆನ್ಸ್ ಶೂನ್ಯವಾದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎನ್ನಲಾಗಿದೆ.