ದಾವಣಗೆರೆ: ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಡತಗಳಿಗೆ ಸಹಿ ಹಾಕಲು ಲಂಚ ಪಡೆದಿರುವುದಕ್ಕೆ ಸಮರ್ಪಕ ದಾಖಲೆಗಳಿದ್ದಲ್ಲಿ ತನಿಖೆಗೆ ಆದೇಶಿಸಿ, ನನ್ನ ವಿರುದ್ಧ ಸಾಕ್ಷ್ಯಗಳು ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಡತಗಳಿಗೆ ಸಹಿ ಹಾಕಲು ಕುಮಾರಸ್ವಾಮಿ ಲಂಚ ಪಡೆಯುತ್ತಿದ್ದರು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ತನಿಖೆ ನಡೆಸುವ ಯೋಗ್ಯತೆ ಇಲ್ಲದ ನೀವು ಬಾಯಿ ಚಪಲಕ್ಕೆ ಏಕೆ ಆರೋಪಿಸುತ್ತೀರಿ ಎಂದು ಕಿಡಿಕಾರಿದ್ದಾರೆ.
ಶಾಸಕ ಬಾಲಕೃಷ್ಣ ಕಾಮಗಾರಿ ಕೈಗೊಳ್ಳದೆ 600 ಕೋಟಿ ರೂ. ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಸಿದ್ದರಾಮಯ್ಯ ಮತ್ತು ಹೆಚ್.ಸಿ. ಮಹದೇವಪ್ಪ ಈ ಹಿಂದೆ ಸದನದಲ್ಲಿ ಪ್ರಸ್ತಾಪಿಸಿದ್ದರು. ಸದನ ಸಮಿತಿ ರಚಿಸಲು ಆಗ್ರಹಿಸಿದ್ದರು. ಈಗ ಇಂತಹ ಶಾಸಕರನ್ನು ಜೊತೆಗಿಟ್ಟುಕೊಂಡಿದ್ದಾರೆ ಎಂದು ಹೆಚ್.ಡಿ.ಕೆ. ಹೇಳಿದ್ದಾರೆ.