ಬೆಳಗಾವಿ: ವಾಯು ಮಾಲಿನ್ಯ, ಜಲ ಮಾಲಿನ್ಯ ಕಾಯಿದೆ ಉಲ್ಲಂಘನೆ ಮಾಡಿದರೆ, ಅಂತಹ ಕಾರ್ಖಾನೆಗಳನ್ನು ಮುಚ್ಚಲು ಈಗಾಗಲೇ ಆದೇಶವನ್ನು ನೀಡಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಭೀಮಣ್ಣ ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ 400 ಕೆರೆಗಳಿಗೆ ಇರುವ ಮಾಲಿನ್ಯದ ಬಗ್ಗೆ ಕಾಲ ಕಾಲಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಕಾಲ ಕಾಲಕ್ಕೆ ನೀರು ಆಗಲಿ ಅಥವಾ ಶುದ್ಧೀಕರಣ ಮಾಡದಿದ್ದರೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಕಾಯಿದೆ ಉಲ್ಲಂಘನೆ ಮಾಡಿದರೆ, ಅಂತಹ ಕಾರ್ಖಾನೆಗಳನ್ನು ಮುಚ್ಚಲು ಈಗಾಗಲೇ ಆದೇಶವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ತುಂಗಾ ನದಿಯಲ್ಲಿರುವ ಅಲ್ಯೂಮಿನಿಯಂ ಪ್ರಮಾಣದ ಬಗ್ಗೆ ವರದಿಯನ್ನು ಇದ್ದು, ಸಂಪೂರ್ಣ ಒದಗಿಸಲಾಗುವುದು ಎಂದರಲ್ಲದೆ, ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಕಾರ್ಖಾನೆಗಳು ಹಾಗೂ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಧನಂಜಯ ಸರ್ಜಿ ಮಾತನಾಡಿ, ರಾಜ್ಯದಲ್ಲಿ ಕೈಗಾರಿಕೆಗಳ ತ್ಯಾಜ್ಯದಿಂದ ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಹಾಗೂ ನದಿಗಳ ನೀರು ಕಲುಷಿತವಾಗಿ ಅಲ್ಯೂಮಿನಿಯಂ ಅಂಶವು ಹೆಚ್ಚಳಗೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಈ ಬಗ್ಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ
ರಾಜ್ಯದಲ್ಲಿ ನದಿಗಳ ನೀರು ಕಲುಷಿತವಾಗುವುದರಿಂದ ಕುಡಿಯುವ ನೀರಿನಲ್ಲೂ ಅಲ್ಯೂಮಿನಿಯಂ ಅಂಶ ಹೆಚ್ಚಾಗಿದೆ. ಅಲ್ಯೂಮಿನಿಯಂ ಹೆಚ್ಚಾಗುವುದರಿಂದ ಮೆದುಳಿಗೆ ತೊಂದರೆ, ಮೂಳೆ, ಲಿವರ್, ಸಮಸ್ಯೆಗಳಾಗುತ್ತಿದೆ. ಈ ಅಲ್ಯೂಮಿನಿಯಂ ಅಂಶವು ರಾಜ್ಯದ ಯಾವೆಲ್ಲಾ ನದಿಗಳಲ್ಲಿದೆ ಎಂದು ಪತ್ತೆ ಮಾಡಲಾಗಿದೆ, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಪ್ರಪಂಚದ 195 ದೇಶಗಳಲ್ಲಿ ಕಲುಷಿತ ನೀರಿನಲ್ಲಿ ಭಾರತವು 122 ನೇ ಶ್ರೇಣಿಯಲ್ಲಿದೆ , ನದಿಗಳಲ್ಲಿ ಶೇ. 70 ರಷ್ಟು ನೀರು ಕಲುಷಿತಗೊಂಡಿದೆ, ಇದರಿಂದಾಗಿ 3 ಕೋಟಿ 87 ಲಕ್ಷ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕಲುಷಿತ ನೀರಿನಿಂದಾಗಿ ನಮ್ಮ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಕ್ಕಳು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಹಾಗೂ ಕೆಮಿಕಲ್ ಯುಕ್ತವಾಗಿ ಕಿಡ್ನಿ, ಲಿವರ್ ತೊಂದರೆಗಳು ಹೆಚ್ಚಾಗುತ್ತಿದೆ. ಕೆಲವು ನದಿಗಳಲ್ಲಿ ಕಲುಷಿತ ನೀರಿನಿಂದಾಗಿ ಮೀನುಗಳು, ಕಪ್ಪೆಗಳು ಹಾಗೂ ದನ ಕರುಗಳ ಸಾವಾಗಿದೆ. ಹಾಗಾಗಿ ಕೈಗಾರಿಕೆಗಳು ವಿವಿಧ ರೀತಿಯ ತ್ಯಾಜ್ಯಗಳನ್ನು ವಿಲೇವಾರಿಗೆ ಅನುಸರಿಸಬೇಕಾದ ಮಾನದಂಡಗಳು, ಕೈಗಾರಿಕೆಗಳು ಮಾನದಂಡಗಳನ್ನು ಪಾಲಿಸದೆ ಅಪಾಯಕಾರಿ ತ್ಯಾಜ್ಯಗಳನ್ನು ನೇರವಾಗಿ ಕೆರೆ/ನದಿಗಳಿಗೆ ಬಿಡುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.