ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜುಲೈ 29ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ನೌಕರರ ಬೇಡಿಕೆಗಳನ್ನು ಜುಲೈ 28 ರೊಳಗೆ ಈಡೇರಿಸುವ ಭರವಸೆ ನೀಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಂಘದ ಅಧ್ಯಕ್ಷ ಅಮೃತರಾಜ್ ಪತ್ರ ಬರೆದಿದ್ದಾರೆ.
7ನೇ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಸರ್ಕಾರಿ ನೌಕರರಿಗೆ ಬೇಡವಾದ ಹೊಸ ಪಿಂಚಣಿ ಪದ್ಧತಿ ರದ್ದುಪಡಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ತರಬೇಕು. ಕೂಡಲೇ ವೃಂದ ಮತ್ತು ನೇಮಕಾತಿ ನಿಯಮಾವಳಿ ಕರಡು ಅಧಿಸೂಚನೆ ಹೊರಡಿಸಬೇಕು. ಪಾಲಿಗೆ ನೌಕರರಿಗೂ ಕೆಜಿಐಡಿ ಮತ್ತು ಜಿಪಿಎಫ್ ಜಾರಿ ಮಾಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.