ಬೆಂಗಳೂರು: ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಎಲ್ಲ ಸರ್ಕಾರಿ ನೌಕರರಿಗೂ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಸುಮಾರು 13 ಸಾವಿರ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ವ್ಯಾಪ್ತಿಗೆ ತರಲಾಗಿದೆ. ಇಚ್ಛಾಶಕ್ತಿ ಇದ್ದರೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಎಲ್ಲಾ ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
2006ರ ಏಪ್ರಿಲ್ 1ಕ್ಕಿಂತ ಮೊದಲು ಹೊರಡಿಸಿದ್ದ ಅಧಿಸೂಚನೆಯಂತೆ ನೇಮಕವಾದ ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆಗೆ ಸೇರಿಸಬೇಕು ಎಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದರೂ ಎಷ್ಟು ದಿನ ಮೀನಮೇಷ ಮಾಡಿದ್ದ ರಾಜ್ಯ ಸರ್ಕಾರ ಈಗ ಚುನಾವಣೆ ಸಮೀಪದಲ್ಲಿರುವಾಗ ರಾಜಕೀಯ ಲಾಭ ಮಾಡಿಕೊಳ್ಳಲು ಆದೇಶ ಹೊರಡಿಸಿದೆ ಹೊರತು ನೌಕರರ ಮೇಲಿನ ಪ್ರೀತಿಯಿಂದಲ್ಲ ಎಂದು ಟೀಕಿಸಿದ್ದಾರೆ.