ಬೆಂಗಳೂರು: ಕೇಂದ್ರ ಸರ್ಕಾರಿ ಕಚೇರಿಗಳ ಮಾದರಿಯಲ್ಲಿ ವಾರದಲ್ಲಿ ಐದು ದಿನ ಕೆಲಸ ಪದ್ಧತಿ ಹಾಗೂ ಎನ್.ಪಿ.ಎಸ್. ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘದ ವತಿಯಿಂದ 7ನೇ ವೇತನ ಆಯೋಗಕ್ಕೆ ಮನವಿ ಮಾಡಲಾಗಿದೆ.
ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ನೇತೃತ್ವದಲ್ಲಿ ನಿಯೋಗ ತೆರಳಿ 7ನೇ ವೇತನ ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ಹೊನ್ನಳ್ಳಿ, ಕಾರ್ಯದರ್ಶಿ ಹೆಪ್ಸಬಾ ರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಲಾಗಿದೆ.
ವಾರದಲ್ಲಿ 5 ದಿನ ಕೆಲಸ, ಒಪಿಎಸ್ ಜಾರಿ, ಕನಿಷ್ಠ ಮೂಲವೇತನ 17 ಸಾವಿರ ರೂ.ನಿಂದ 35,000 ರೂ.ಗೆ ನಿಗದಿಪಡಿಸಬೇಕು. ತುಟ್ಟಿ ಭತ್ಯೆ ಮೂಲವೇತನದಲ್ಲಿ ವಿಲೀನಗೊಳಿಸಿ ಅದಕ್ಕೆ ಶೇ. 40 ರಷ್ಟು ಫಿಟ್ಮೆಂಟ್ ನೀಡಿ ಮೂಲವೇತನ ಪರಿಷ್ಕರಿಸಬೇಕು. ವೇತನ ಪರಿಷ್ಕರಣಿಯನ್ನು ಜುಲೈ 2022 ರಿಂದ ಪೂರ್ವಾನ್ವಯವಾಗುವಂತೆ ಮಾಡಲು ಮನವಿ ಮಾಡಲಾಗಿದೆ.
ವಾರ್ಷಿಕ ವೇತನ ಬಡ್ತಿ ದರ ಕನಿಷ್ಠ ಶೇಕಡ 5 ಎಂದು ನಿಗದಿ ಮಾಡಬೇಕು. ಸಚಿವಾಲಯ ಸೇವೆಯ ಎಲ್ಲಾ ವೃಂದಗಳಿಗೂ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಮಾಡಬೇಕು. ಅಧಿವೇಶನ ಅವಧಿ ಭತ್ಯೆಯನ್ನು ದಿನಕ್ಕೆ 500 ರೂ.ನಿಂದ 1000 ರೂ.ಗೆ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ವೇತನ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ ನೌಕರರು ಮನವಿ ಮಾಡಿದ್ದಾರೆ.