ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು. ಹಳೆಯ ನಿಶ್ಚಿತ ಪಿಂಚಣಿ ಮರುಸ್ಥಾಪನೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬುಧವಾರ ಪ್ರತಿಭಟನೆಗೆ ಕರೆ ನೀಡಿದೆ.
ವೇತನ ಆಯೋಗದ ಪರಿಷ್ಕರಣೆಯನ್ನು 2022ರ ಜುಲೈ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು. ಯಾವುದೇ ಕಾರಣಕ್ಕೂ ವೇತನ ಕಡಿತಗೊಳಿಸಬಾರದು. 2.60 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೊರಗುತ್ತಿಗೆ ನೌಕರರಿಗೆ ಕೆಲಸದ ಭದ್ರತೆ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ, ಪ್ರಭಾರ ಭತ್ಯೆ, ಅಂಗವಿಕಲ ನೌಕರರ ಭತ್ಯೆ, ಸಮವಸ್ತ್ರ ಭತ್ಯೆ, ಕುಟುಂಬ ಯೋಜನಾ ಭತ್ಯೆಗಳು ಬೆಲೆ ಏರಿಕೆಗೆ ಅನುಗುಣವಾಗಿ ಇರಬೇಕೆಂದು ಒತಾಯಿಸಲಾಗಿದೆ.
ಹೊಸ ಪಿಂಚಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರರಿಗೆ ಯಾವುದೇ ನಿಶ್ಚಿತ ಪ್ರಮಾಣದ ಪಿಂಚಣಿ ಸಿಗದೆ ಸಂಧ್ಯಾಕಾಲದಲ್ಲಿ ಬದುಕು ಬೀದಿಗೆ ಬಿದ್ದಂತಾಗಿದೆ. ಹಾಗಾಗಿ ಹಳೇ ಪಿಂಚಣಿಯನ್ನು ಮರು ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.