ಬೆಂಗಳೂರು : ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಕುರಿತು ಆಗಸ್ಟ್ 15 ರ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಭೇಟಿ ನೀಡಿ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಈ ವೇಳೆ ಆಗಸ್ಟ್ 15 ರ ನಂತರ ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ ಎಂದರು.
ಲೋಕಸಭೆ ಚುನಾವಣೆ ಸಿದ್ಧತೆ, ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿ, ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಕುರಿತು ಚರ್ಚೆ ಮಾಡಿದ್ದೇವೆ. ಶೀಘ್ರವೇ ರಾಜ್ಯ ಸರ್ಕಾರದ ಎಲ್ಲ ವೈಫಲ್ಯಗಳ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.