
ಬೆಂಗಳೂರು: ವಿವಿಗಳನ್ನು ಬಂದ್ ಮಾಡುವುದಕ್ಕೆ ಕಾಂಗ್ರೆಸ್ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ. ಶಾಸಕಾಂಗ ಸಭೆಯಲ್ಲಿ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಲು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ, ಕೊಡಗು ವಿಶ್ವವಿದ್ಯಾಲಯ ಬಂದ್ ಮಾಡದಂತೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ. ವಿವಿಗಳನ್ನು ಬಂದ್ ಮಾಡಿದರೆ ವಿದ್ಯಾರ್ಥಿಗಳು, ಪೋಷಕರಿಗೆ ಅನಾನುಕೂಲವಾಗುತ್ತದೆ. ಸ್ಥಳೀಯ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿರ್ಣಯ ತೆಗೆದುಕೊಳ್ಳಿ ಎಂದು ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಒತಾಯಿಸಿದ್ದಾರೆ.
ಹಿಂದಿನ ಸರ್ಕಾರದ ವೇಳೆ ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಬಾಗಲಕೋಟೆ, ಕೊಪ್ಪಳ, ಹಾವೇರಿ, ಬೆಂಗಳೂರಿನ ನೃಪತುಂಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ರಚನೆ ಮಾಡಲಾಗಿದೆ. ಈ ವಿವಿಗಳು ರಚನೆಯಾಗಿ ಐದು ವರ್ಷ ಕಳೆದರೂ ಕುಲಪತಿ ನೇಮಕಾತಿಯಾಗಿರುವುದು ಬಿಟ್ಟರೆ ಉಳಿದ ಯಾವ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೊದಲು ನಮ್ಮ ಮುಂದೆ ಕೆಲವೊಂದು ಆಯ್ಕೆಗಳಿದ್ದು, ಯಾವ ವಿವಿಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಉಳಿಸಿಕೊಂಡು ಬಲಗೊಳಿಸಬಹುದು. ಕಡಿಮೆ ಸಂಯೋಜಿತ ಕಾಲೇಜುಗಳು ಇರುವ ವಿವಿಗಳನ್ನು ಏನು ಮಾಡಬಹುದು ಎಂಬುದು ಸೇರಿದಂತೆ ಪರ್ಯಾಯ ವಿಚಾರಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸಚಿವ ಸಂಪುಟದ ಮುಂದೆ ಬಂದು ಮುಖ್ಯಮಂತ್ರಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.