ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿರುವ ಭಾರತ ಯಶಸ್ವಿಯಾಗಿದೆ. ಆದರೆ, ಅಮೆರಿಕ, ಬ್ರಿಟನ್, ಚೀನಾ ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ ಕರೆತರಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತಿವೆ. ಭಾರತದ ‘ಆಪರೇಷನ್ ಗಂಗಾ’ ಏರ್ ಲಿಫ್ಟ್ ಕಾರ್ಯಾಚರಣೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಉಕ್ರೇನ್ ನೊಂದಿಗೆ ಗಡಿ ಹಂಚಿಕೊಂಡಿರುವ 4 ದೇಶಗಳಿಗೆ ಸ್ಥಳೀಯ ಭಾಷೆಯನ್ನು ತಿಳಿದ ಅಧಿಕಾರಿಗಳನ್ನು ನಿಯೋಜಿಸಿದ ಭಾರತ ಆ ದೇಶಗಳ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಉಕ್ರೇನ್ ನಿಂದ ಈ ದೇಶಗಳಿಗೆ ಭಾರತೀಯರನ್ನು ಕರೆತಂದು ಏರ್ ಲಿಫ್ಟ್ ಮಾಡಲಾಗುತ್ತಿದೆ.
ಅಲ್ಲದೇ, ರಾಯಭಾರ ಕಚೇರಿ ಅಧಿಕಾರಿಗಳು ಭಾರತೀಯರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಿಗೆ ತೆರಳಿ ರೈಲು, ಬಸ್ ಮೂಲಕ ಉಕ್ರೇನ್ ಜೊತೆಗೆ ಗಡಿ ಹಂಚಿಕೊಂಡಿರುವ ದೇಶಗಳ ಗಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಮತ್ತೊಂದು ತಂಡ ವಿಮಾನ ವ್ಯವಸ್ಥೆ ಮಾಡುತ್ತಿದೆ. ಇವರೊಂದಿಗೆ ನಾಲ್ವರು ಕೇಂದ್ರ ಸಚಿವರ ನೇತೃತ್ವದಲ್ಲಿ ವಿವಿಧ ದೇಶಗಳಲ್ಲಿ ತಂಡಗಳು ಬೀಡು ಬಿಟ್ಟಿದ್ದು, ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಕರೆತರುವ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಯಶಸ್ವಿಯಾಗಿ ಮುಂದುವರೆದಿದೆ.
ಪ್ರಧಾನಿ ಮೋದಿ ಸೂಚನೆ ಮೇರೆಗೆ ಮತ್ತಷ್ಟು ವೇಗ ನೀಡಲಾಗಿದೆ. ಆದರೆ, ಉಕ್ರೇನ್ ನಲ್ಲಿರುವ ತಮ್ಮ ಪ್ರಜೆಗಳನ್ನು ರಕ್ಷಿಸಲಾಗದ ಅಮೆರಿಕ, ಬ್ರಿಟನ್, ಚೀನಾ ಕೈಚೆಲ್ಲಿ ಕುಳಿತಿವೆ. ನೀವೇ ಸುರಕ್ಷಿತ ವ್ಯವಸ್ಥೆ ಮಾಡಿಕೊಂಡು ಬನ್ನಿ ಎಂದು ನಡು ನೀರಲ್ಲಿ ಕೈಬಿಟ್ಟಿವೆ.