ಬಳ್ಳಾರಿ:
ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಗಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಎಂ.ಶ್ಯಾಮ್ ಅವರು ತಿಳಿಸಿದ್ದಾರೆ.
ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ(KOF) ಬೆಂಗಳೂರು, ವಿಭಾಗೀಯ ಕಚೇರಿ ಬಳ್ಳಾರಿ, ಇವರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‍ಗೆ ರೂ.6,760 ರಂತೆ ರೈತರಿಂದ ಖರೀದಿಗಾಗಿ ಖರೀದಿ ಕೇಂದ್ರ ತೆರೆಯಲಾಗಿದೆ.
ಖರೀದಿ ಕೇಂದ್ರದ ಹೆಸರು:
ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ(KOF), ವಿಭಾಗೀಯ ಕಚೇರಿ, ಬಳ್ಳಾರಿ.
ಮಾಹಿತಿಗಾಗಿ ನಟರಾಜ ಹೊಸಮನಿ ಅವರ ಮೊ.9686513163 ಮತ್ತು ಅಯ್ಯಪ್ಪ ಅವರ ಮೊ.8073797774 ಗೆ ಸಂಪರ್ಕಿಸಬಹುದು.
ಸೂರ್ಯಕಾಂತಿ ಉತ್ಪನ್ನ ಖರೀದಿಗೆ ಬೇಕಾದ ದಾಖಲೆಗಳು:
2023-24 ನೇ ಸಾಲಿನ ಪಹಣಿ ಪತ್ರ, ರೈತರು ತಮ್ಮ ಹೆಸರನ್ನು ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಾಯಿಸಿರಬೇಕು ಹಾಗೂ ಎಫ್‍ಐಡಿ (FID) ಯನ್ನು ಪಡೆಯುವುದು ಕಡ್ಡಾಯವಾಗಿದೆ. ರೈತರ ಬಳಿ ಫ್ರೂಟ್ಸ್ ಐಡಿ (FRUITS ID) ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್ ನಲ್ಲಿ ಯಾವುದಾದರು ತಾಂತ್ರಿಕ ದೋಷವಿದ್ದಲ್ಲಿ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅವಶ್ಯಕ ಮಾಹಿತಿಯನ್ನು ಪಡೆಯಬಹುದು.
ಆಧಾರ್ ಕಾರ್ಡ್ (ಮೂಲ), ಬ್ಯಾಂಕ್ ಖಾತೆ (ಆಧಾರ್ ಕಾರ್ಡ್‍ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿ, ಒಣಗಿದ ಹಾಗೂ ಸ್ವಚ್ಛ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಲು ತರಬೇಕು. ಸೂರ್ಯಕಾಂತಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ಅಕ್ಟೋಬರ್ 21 ರವರೆಗೆ ನೊಂದಣಿ ಮಾಡಿಕೊಳ್ಳಬಹುದು ಹಾಗೂ ನೋಂದಣಿ ಚೀಟಿ ಪಡೆಯಬೇಕು. ಪ್ರತಿ ಎಕರೆಗೆ 03 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ನಿಗದಿತ ಅವಧಿಯೊಳಗೆ ನೋಂದಣಿಗೊಂಡ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು.
ಸೂರ್ಯಕಾಂತಿ ಉತ್ಪನ್ನವನ್ನು ಡಿಸೆಂಬರ್ 05 ರವರೆಗೆ ಖರೀದಿಸಲಾಗುವುದು. ಸಮಯ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮಾತ್ರ ಖರೀದಿಸಲಾಗುವುದು.
ಜಿಲ್ಲೆಯ ರೈತರು ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ರೈತರೇ ನೇರವಾಗಿ ಇದರ ಸೌಲಭ್ಯ ಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.