ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಚುರುಕು ಪಡೆದಿದ್ದು ಕಂಟೋನ್ಮೆಂಟ್ ಶಿವಾಜಿ ನಗರ ಮಧ್ಯೆ ಸುರಂಗ ಮಾರ್ಗ ನಿರ್ಮಾಣ ಮಾಡುತ್ತಿರುವ ಊರ್ಜಾ ತನ್ನ ಕಾಮಗಾರಿ ಪೂರ್ಣಗೊಳಿಸಿದೆ. ಊರ್ಜಾ ಬ್ರೇಕ್ ಥ್ರೂ ಕಾರ್ಯಕ್ಕೆ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಾಕ್ಷಿಯಾದ್ರು.
ಯಂತ್ರವು ಸುರಂಗದಿಂದ ಹೊರಬರುವ ಕ್ಷಣವನ್ನು ಸ್ವತಃ ಸಿಎಂ ಬೊಮ್ಮಾಯಿ ವೀಕ್ಷಣೆ ಮಾಡಿದ್ದಾರೆ. ಚೀನಾದಿಂದ ಆಮದು ಮಾಡಲಾದ ಯಂತ್ರ ಇದಾಗಿದ್ದು, ಸುರಂಗ ಕೊರೆಯುವ ಕಾಮಗಾರಿಗಾಗಿ ಕಳೆದ ವರ್ಷ ಜುಲೈ 30ರಿಂದ ಊರ್ಜಾ ತನ್ನ ಕಾಮಗಾರಿಯನ್ನು ಆರಂಭಿಸಿತ್ತು.
ಊರ್ಜಾ ಯಂತ್ರವು ಪ್ರತಿದಿನ 2.5 ಮೀ ಉದ್ದದ ಸುರಂಗವನ್ನು ಕೊರೆಯುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಈ ಸುರಂಗ ಮಾರ್ಗವು 864 ಮೀಟರ್ ಉದ್ದವಿದೆ. ಅಲ್ಲದೇ ಇದು ಎರಡನೇ ಹಂತದ ಕಾಮಗಾರಿಯ ಮೊದಲ ಸುರಂಗ ಮಾರ್ಗವಾಗಿದೆ. ಗೊಟ್ಟಿಗೆರೆ – ನಾಗವಾರ ನಡುವೆ 13.9 ಕಿಮೀ ಸುರಂಗ ಮಾರ್ಗ, ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವೆ 9.28 ಕಿಮೀ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ.
ಉರ್ಜಾ ತನ್ನ ಕಾಮಗಾರಿಯನ್ನು ಇಂದು ಪೂರ್ಣಗೊಳಿಸಿದೆ. ಇನ್ನೊಂದು ಯಂತ್ರ ವಿಂಧ್ಯ ಇನ್ನೂ ತನ್ನ ಕಾರ್ಯವನ್ನು ಪೂರ್ಣಗೊಳಿಸಬೇಕಿದೆ. ಮುಂದಿನ ತಿಂಗಳು ವಿಂಧ್ಯ ಕೂಡ ತನ್ನ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಇತ್ತ ಅವನಿ ಹಾಗೂ ಲವಿ ಶಿವಾಜಿನಗರದಿಂದ ಎಂಜಿ ರಸ್ತೆ ಕಡೆಗೆ ಸುರಂಗ ನಿರ್ಮಾಣ ಮಾಡುತ್ತಿವೆ. ಆರ್ಟಿ 01 ವೆಲ್ಲಾ ಜಂಕ್ಷನ್ನಿಂದ ಲ್ಯಾಂಗ್ ಫೋರ್ಡ್ನಲ್ಲಿ ಕಾಮಗಾರಿ ಕೈಗೊಂಡಿದೆ. ಭದ್ರಾ ಕೂಡ ತನ್ನ ಕಾಮಗಾರಿ ಆರಂಭ ಮಾಡಿದೆ.