ಅಹಮದಾಬಾದ್: ತುಂಬಾ ದಪ್ಪ ಇರೋರಿಗೆ ಸಣ್ಣ ಆಗುವ ಚಿಂತೆ. ಇದಕ್ಕಾಗಿ ಡಯೆಟ್ ಮಾಡುತ್ತಿರುತ್ತಾರೆ. ಆದರೆ, ಕಳ್ಳತನ ಮಾಡಲು ಸಣ್ಣ ಆಗಿರೋರ ಬಗ್ಗೆ ಎಂದಾದ್ರೂ ಕೇಳಿದ್ರಾ..? ಹೌದು, ಇಲ್ಲೊಬ್ಬ ಐನಾತಿ ಕಳ್ಳ, ಇದಕ್ಕೆಂದೇ 10 ಕೆ.ಜಿ.ಯಷ್ಟು ತೂಕ ಇಳಿಸಿಕೊಂಡಿದ್ದಾನೆ.
ಅಹಮದಾಬಾದ್ ನ ಮೋತಿ ಸಿಂಗ್ ಚೌಹಾಣ್ ಎಂಬ ವ್ಯಕ್ತಿ ಕಳ್ಳತನ ಮಾಡಲೆಂದೇ 10 ಕೆ.ಜಿ. ತೂಕ ಇಳಿಸಿಕೊಂಡಿದ್ದಾನೆ. ಇದಕ್ಕಾಗಿ ಆತ ಮೂರು ತಿಂಗಳುಗಳ ಕಾಲ ಒಂದೇ ಹೊತ್ತು ಊಟ ಮಾಡುತ್ತಿದ್ದನಂತೆ..!
ಎರಡು ವರ್ಷಗಳ ಹಿಂದೆ, 34 ವರ್ಷದ ಮೋತಿ ಸಿಂಗ್ ಭೋಪಾಲ್‌ನ ಮೋಹಿತ್ ಮರಾಡಿಯಾ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಬೆಲೆಬಾಳುವ ವಸ್ತುಗಳನ್ನು ಎಲ್ಲೆಲ್ಲಿ ಇಡಲಾಗಿದೆ ಎಂಬ ಮಾಹಿತಿ ಕಲೆಹಾಕಿದ್ದು, ಸಿಸಿ ಟಿವಿ ಕ್ಯಾಮರಾ ಇರುವ ಸ್ಥಳದ ಬಗ್ಗೆಯೂ ತಿಳಿದುಕೊಂಡಿದ್ದ. ಮನೆಯಲ್ಲಿ ಎಲೆಕ್ಟ್ರಾನಿಕ್ ಬಾಗಿಲುಗಳನ್ನು ಹೊಂದಿದ್ದು ಅದನ್ನು ಸಾಂಪ್ರದಾಯಿಕ ವಿಧಾನಗಳಿಂದ ಮುರಿಯಲು ಸಾಧ್ಯವಿಲ್ಲ. ಹಾಗಾಗಿ ಮನೆಯೊಳಗೆ ನುಗ್ಗಲು ತಕ್ಕ ತಯಾರಿ ನಡೆಸಬೇಕಿತ್ತು. ಅದಕ್ಕಾಗಿ ಆತ ಮೂರು ತಿಂಗಳುಗಳ ಕಾಲ ಒಂದು ಹೊತ್ತು ಮಾತ್ರ ಆಹಾರವನ್ನು ಸೇವಿಸುತ್ತಿದ್ದ. ಇದರಿಂದ 10 ಕೆ.ಜಿ.ಯಷ್ಟು ತೂಕ ಇಳಿಸಿಕೊಂಡಿದ್ದ.
ಮೋತಿ ಸಿಂಗ್ ಗೆ ಸಿಸಿಟಿವಿ ಕ್ಯಾಮರಾ ಎಲ್ಲೆಲ್ಲಿವೆ ಎಂಬ ಬಗ್ಗೆ ಚೆನ್ನಾಗಿಯೇ ಗೊತ್ತಿದ್ದರಿಂದ ಅದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಹೀಗಾಗಿ ಐನಾತಿ ಕಳ್ಳನನ್ನು ಹಿಡಿಯಲು ಪೊಲೀಸರಿಗೆ ಕಷ್ಟವಾಗಿತ್ತು.
ಮನೆಯೊಳಗೆ ನುಗ್ಗಲು ಕಳ್ಳ ಮೋತಿ ಸಿಂಗ್, ಅಡುಗೆಮನೆಯ ಕಿಟಕಿಯ ಗಾಜನ್ನು ಕತ್ತರಿಸಿ ನುಗ್ಗಿದ್ದ. ಬಳಿಕ ಮನೆಯಲ್ಲಿದ್ದ 37 ಲಕ್ಷ ರೂ. ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಇದಕ್ಕಾಗಿ ಟ್ರೊವೆಲ್ ಮತ್ತು ಗರಗಸವನ್ನು ಖರೀದಿಸಲು ಹೋಗಿದ್ದ ಹಾರ್ಡ್‌ವೇರ್ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಕೊನೆಗೂ ಕಳ್ಳ ಮೋತಿಯ ಜಾಡನ್ನು ಪತ್ತೆಹಚ್ಚಿದ ಪೊಲೀಸರು ಆತನ ಕೈಗೆ ಕೋಳ ತೊಡಿಸಿದ್ದಾರೆ. ಕದ್ದಿದ್ದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳನ ಮೊಬೈಲ್ ಲೊಕೇಶನ್ ಬೆಂಬತ್ತಿದ್ದ ಪೊಲೀಸರಿಗೆ ಅವನ ಸುಳಿವು ಸಿಕ್ಕಿದೆ. ಉದಯಪುರಕ್ಕೆ ಪರಾರಿಯಾಗುತ್ತಿದ್ದಾಗ ಅಡ್ಡಗಟ್ಟಿದ ಪೊಲೀಸರು ಮೋತಿ ಸಿಂಗ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.