ದೇಶದ ಅನೇಕ ದೇವಾಲಯಗಳಲ್ಲಿ ಹಿಂದೂಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿಲ್ಲ. ಅಂತಹ ದೇವಾಲಯಗಳಲ್ಲಿ ಈ ಕುರಿತ ಸೂಚನೆಯನ್ನು ಅಳವಡಿಸಬೇಕೆಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ದೇವಸ್ಥಾನಗಳು ಯಾರು ಬೇಕಾದರೂ ಭೇಟಿ ನೀಡಬಲ್ಲ ಪಿಕ್ನಿಕ್ ತಾಣಗಳಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುವ ಭಾರತದ ದೇವಾಲಯಗಳು ಯಾವ್ಯಾವುವು ಎಂಬುದನ್ನು ನೋಡೋಣ.
ಪುರಿ ಜಗನ್ನಾಥ ದೇವಾಲಯ
ಪ್ರತಿ ವರ್ಷ ಲಕ್ಷಾಂತರ ಭಕ್ತರು ಪುರಿ ಜಗನ್ನಾಥನ ದರ್ಶನಕ್ಕಾಗಿ ಬರುತ್ತಾರೆ. ಮದ್ರಾಸ್ ಹೈಕೋರ್ಟಿನ ತೀರ್ಪಿನಂತೆ ಈ ದೇವಾಲಯದಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಧರ್ಮನಿಷ್ಠ ಹಿಂದೂಗಳಿಗೆ ಮಾತ್ರ ಇಲ್ಲಿ ಪ್ರವೇಶ ಸಿಗುತ್ತದೆ. ಅಷ್ಟೇ ಅಲ್ಲ ಈ ದೇವಸ್ಥಾನಕ್ಕೆ ವಿದೇಶಿ ಪ್ರವಾಸಿಗರ ಪ್ರವೇಶಕ್ಕೂ ನಿರ್ಬಂಧವಿದೆ. ಮುಸ್ಲಿಂ ಆಡಳಿತಗಾರರ ದಾಳಿಯ ನಂತರ ಈ ದೇವಾಲಯಕ್ಕೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಯಿತು.
ಕಪಾಲೀಶ್ವರ ದೇವಸ್ಥಾನ, ಚೆನ್ನೈ
ಚೆನ್ನೈನ ಮಲಯಪುರದಲ್ಲಿರುವ ಕಪಾಲೀಶ್ವರ ದೇವಸ್ಥಾನದಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದು 17ನೇ ಶತಮಾನದ ಐತಿಹಾಸಿಕ ದೇವಾಲಯ. ದ್ರಾವಿಡ ನಾಗರಿಕತೆಯ ಈ ಶಿವ ದೇವಾಲಯಕ್ಕೆ ಹಿಂದೂಗಳು ಮಾತ್ರ ಭೇಟಿ ನೀಡಬಹುದು. ಇಲ್ಲಿಗೆ ವಿದೇಶಿಯರು ಕೂಡ ಬರುವಂತಿಲ್ಲ.
ಗುರುವಾಯೂರ್ ದೇವಾಲಯ
ಗುರುವಾಯೂರ್ ದೇವಾಲಯವು ಕೇರಳದ ತ್ರಿಶೂರ್‌ನಲ್ಲಿದೆ. ಇದರ ಇತಿಹಾಸ ಐದು ಸಾವಿರ ವರ್ಷಗಳಷ್ಟು ಹಳೆಯದು. ಈ ದೇವಾಲಯದಲ್ಲಿ ಬಾಲಕೃಷ್ಣನ ದರ್ಶನ ಮಾಡಬಹುದು. ಭಗವಾನ್ ವಿಷ್ಣು ಕೂಡ ಇಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಇದೆ. ಆದರೆ ಇಲ್ಲಿ ಹಿಂದೂಯೇತರರು ಮತ್ತು ವಿದೇಶಿ ಪ್ರವಾಸಿಗರಿಗೆ ಪ್ರವೇಶವಿಲ್ಲ.
ದಿಲ್ವಾರಾ ದೇವಾಲಯ
ರಾಜಸ್ಥಾನದ ಮೌಂಟ್ ಅಬುದಲ್ಲಿರುವ ದಿಲ್ವಾರಾ ದೇವಾಲಯವು ಜೈನ ಧರ್ಮಕ್ಕೆ ಸಮರ್ಪಿತವಾಗಿದೆ. ಇದು ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. 11 ಮತ್ತು 13 ನೇ ಶತಮಾನದ ನಡುವೆ ನಿರ್ಮಿಸಲಾದ ಈ ದೇವಾಲಯದಲ್ಲಿ ಛಾಯಾಗ್ರಹಣಕ್ಕೆ ಅವಕಾಶವಿಲ್ಲ. ಅಷ್ಟೇ ಅಲ್ಲ ಹಿಂದೂಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ವಿಶ್ವನಾಥ ದೇವಾಲಯ
ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯವು ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ. ಇಲ್ಲಿ ಹಿಂದೂಯೇತರರ ಪ್ರವೇಶಕ್ಕೆ ನಿಷೇಧವಿದೆ. ಆದರೆ ವಿದೇಶಿಯರು ಇಲ್ಲಿಗೆ ಬರಬಹುದು. ಇಲ್ಲಿ ಉತ್ತರ ದಿಕ್ಕಿನಲ್ಲಿ ನಿರ್ಮಿಸಲಾದ ಕುಪೋರ್ ಬಾವಿ ಸಾಕಷ್ಟು ಪವಿತ್ರವಾಗಿದ್ದು ಅಲ್ಲಿಗೆ ಹಿಂದೂಯೇತರರು ಹೋಗುವಂತಿಲ್ಲ.
ಲಿಂಗರಾಜ ದೇವಸ್ಥಾನ
ಒಡಿಶಾದ ಭುವನೇಶ್ವರದಲ್ಲಿರುವ ಲಿಂಗರಾಜ ದೇವಾಲಯವು ದೇಶಾದ್ಯಂತ ಸಾಕಷ್ಟು ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಹಿಂದೂಗಳು ಮಾತ್ರ ಪ್ರವೇಶಿಸಬಹುದು. ಈ ಹಿಂದೆ ವಿದೇಶಿಯರಿಗೆ ಈ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿತ್ತು, ಆದರೆ 2012 ರಲ್ಲಿ ವಿದೇಶಿ ಪ್ರವಾಸಿಗರು ಧಾರ್ಮಿಕ ಕ್ರಿಯೆಗಳಿಗೆ ಅಡ್ಡಿಪಡಿಸಿದ ನಂತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.