ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಇದೇ ಹಾದಿಯನ್ನು ತುಳಿದಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಯನ್ನು ಸರಳೀಕೃತಗೊಳಿಸಲಾಗಿದ್ದರೆ ವಾಯುಮಾಲಿನ್ಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಸಂಭ್ರಮಕ್ಕೂ ಬ್ರೇಕ್ ಬಿದ್ದಂತಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹಸಿರು ಪಟಾಕಿಗಳನ್ನು ಹಚ್ಚಲು ಮಾತ್ರ ಅವಕಾಶ ನೀಡಲಾಗಿದೆ. ಅದೂ ಕೇವಲ 2 ಗಂಟೆಗಳು ಮಾತ್ರ ಹಸಿರು ಪಟಾಕಿಯನ್ನು ಹಚ್ಚಲು ಜನತೆಗೆ ಅವಕಾಶ ಇರಲಿದೆ. ದೀಪಾವಳಿ ದಿನದಂದು ರಾತ್ರಿ 8 ರಿಂದ 10 ಗಂಟೆಯವರೆಗೆ ಹಾಗೂ ಕ್ರಿಸ್ಮಸ್ ದಿನದಂದು 35 ನಿಮಿಷಗಳು ಮತ್ತು ಹೊಸ ವರ್ಷದಂದು ರಾತ್ರಿ 11:55ರಿಂದ ಮುಂಜಾನೆ 12:35ರವರೆಗೆ ಮಾತ್ರ ಪಟಾಕಿ ಹಚ್ಚಲು ಅವಕಾಶ ನೀಡಲಾಗುವುದು ಎಂದು ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ.
ಇನ್ನು ಕರ್ನಾಟಕದಲ್ಲಿ ಕಳೆದ ವರ್ಷ ಪಟಾಕಿಗಳ ಮಾರಾಟಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಕೋವಿಡ್ ಸಾಂಕ್ರಾಮಿಕವನ್ನು ಗಮನದಲ್ಲಿರಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ವರ್ಷದ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಆದರೆ ಇನ್ನೂ ಸರ್ಕಾರದಿಂದ ಯಾವುದೇ ನಿರ್ಧಾರ ಪ್ರಕಟವಾಗದೇ ಇರೋದು ಸಾಮಾನ್ಯ ಜನತೆ ಹಾಗೂ ಪಟಾಕಿ ಮಾರಾಟಗಾರರಿಗೆ ಗೊಂದಲ ಸೃಷ್ಟಿಸಿದೆ.
https://twitter.com/ANI/status/1453237961273794563