
ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಹೋದರನ ಮೃತದೇಹಕ್ಕೆ ಸಹೋದರಿಯರು ರಾಖಿ ಕಟ್ಟಿದ ಹೃದಯವಿದ್ರಾವಕ ಘಟನೆ ನಡೆದಿದೆ.
ರವಿಶಂಕರ ವಾರ್ಡ್ ನ ಪಪ್ಪು ಭಲ್ಲಾ ಅವರಿಗೆ 17 ವರ್ಷದ ಪುತ್ರ ರಾಜು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜು ಬಾಲ್ಯದಿಂದಲೂ ಮಾನಸಿಕವಾಗಿ ದುರ್ಬಲನಾಗಿದ್ದು, ಆತನಿಗೆ ದೇಹ ಬೆಳೆದಿದ್ದರೂ, ಮನಸ್ಸು ಮಾತ್ರ ಮುಗ್ದ ಮಗುವಿನಂತಿತ್ತು. ರಾಜು ತಂಗಿಯರಿಬ್ಬರೂ ಅಣ್ಣನನ್ನು ಆರೈಕೆ ಮಾಡುತ್ತಿದ್ದರು.
ಆದರೆ ರಕ್ಷಾ ಬಂಧನದ ಹಿಂದಿನ ದಿನ ರಾಜು ಮೃತಪಟ್ಟಿದ್ದಾನೆ. ಸ್ಮಶಾನದಲ್ಲಿ ರಾಜು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ರಕ್ಷಾ ಬಂಧನದ ದಿನದಂದು ರಾಜುಗೆ ಕಟ್ಟಲು ರಾಖಿ ತಂದಿಟ್ಟುಕೊಂಡಿದ್ದ ಸಹೋದರಿಯರು ರಾಜು ಮೃತದೇಹಕ್ಕೆ ರಾಖಿ ಕಟ್ಟಿದ್ದಾರೆ. ಮಾತ್ರವಲ್ಲ, ಸಹೋದರಿಯರು ಅಂತ್ಯಕ್ರಿಯೆಯ ವಿಧಿ ವಿಧಾನ ಸಂಪ್ರದಾಯ ನೆರವೇರಿಸಿದ್ದಾರೆ. ಈ ಭಾವುಕ ಕ್ಷಣದಲ್ಲಿ ನಾರಾಯಣವಾಲಿ ನಾಕಾ ಮುಕ್ತಿಧಾಮದಲ್ಲಿ ನೆರೆದಿದ್ದ ಎಲ್ಲರೂ ದುಃಖಿತರಾಗಿದ್ದರು. ಅಣ್ಣ-ತಂಗಿಯರ ಬಾಂಧವ್ಯವನ್ನು ಕಂಡ ಅಲ್ಲಿದ್ದವರ ಕಣ್ಣಾಲಿಗಳು ತುಂಬಿ ಬಂದಿವೆ.