ಅಮೀರ್ ಖಾನ್, ನಾಸಿರುದ್ದೀನ್ ಶಾ ಮತ್ತು ಸೋನಾಲಿ ಬೇಂದ್ರೆ ನಟನೆಯ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಸರ್ಫರೋಶ್ ಬಿಡುಗಡೆಯಾಗಿ ಏಪ್ರಿಲ್ 30ಕ್ಕೆ 25 ವರ್ಷ. ಈ ವಿಶೇಷ ಸಂದರ್ಭದಲ್ಲಿ, ನಿರ್ದೇಶಕ ಜಾನ್ ಮ್ಯಾಥ್ಯೂ ಮ್ಯಾಥನ್ ಚಿತ್ರದ ಮುಂದುವರಿದ ಭಾಗದೊಂದಿಗೆ ಬರಲು ಯೋಜಿಸುತ್ತಿದ್ದಾರೆ. ಸರ್ಫರೋಶ್ 2 ಗೆ ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ.
ಸರ್ಫರೋಶ್ ಚಿತ್ರದಲ್ಲಿ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಕಳ್ಳಸಾಗಣೆಯನ್ನು ತೊಡೆದುಹಾಕಲು ನಿರ್ಧರಿಸಿದ ಎಸಿಪಿ ಅಜಯ್ ಸಿಂಗ್ ರಾಥೋಡ್ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿದ್ದಾರೆ. ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ತನಿಖೆಯ ಜಾಡು ಹಿಡಿದ ನಾಯಕನಿಗೆ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್, ಪಾಕಿಸ್ತಾನಿ ಭಯೋತ್ಪಾದಕ ಗುಲ್ಫಾಮ್ ಹಸನ್ ಪತ್ತೆಯಾಗುತ್ತಾನೆ. ಹಸನ್ ಪಾತ್ರವನ್ನು ನಾಸಿರುದ್ದೀನ್ ಶಾ ನಿರ್ವಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದಾಗ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಸರ್ಫರೋಶ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಚಿತ್ರದ ಮುಂದುವರಿದ ಭಾಗದ ವರದಿಗಳ ನಡುವೆ, ನಿರ್ದೇಶಕರ ಹಳೆಯ ಸಂದರ್ಶನವು ವೈರಲ್ ಆಗಿದೆ. ಇದರಲ್ಲಿ ಅವರು ಚಿತ್ರದ ಬಗ್ಗೆ ಕೆಲವು ಆಸಕ್ತಿದಾಯಕ ಮತ್ತು ಹಲವರಿಗೆ ತಿಳಿದಿಲ್ಲದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
“ನಾನು ‘ಸರ್ಫರೋಶ್’ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿರಲಿಲ್ಲ. ಅದರ ಬಗ್ಗೆ ಅಮೀರ್ ಮತ್ತು ನಾಸಿರುದ್ದೀನ್ ಮಾತ್ರ ತಿಳಿದಿದ್ದರು. ನೆರೆಹೊರೆ ದೇಶದ ಹೆಸರನ್ನು ತೆಗೆದುಕೊಳ್ಳಲು ನಾನು ತುಂಬಾ ಹೆದರುತ್ತಿದ್ದೆ. ಏಕೆಂದರೆ ಅದಕ್ಕೂ ಮೊದಲು ಯಾರೂ ಪಾಕಿಸ್ತಾನವನ್ನು ಆ ರೀತಿ ತೋರಿಸಿರಲಿಲ್ಲ. ಮತ್ತು ನಾವು ನೆರೆಯ ದೇಶದ ಹೆಸರನ್ನು ತೆಗೆದುಕೊಳ್ಳಬಾರದು ಎಂದು ಸೆನ್ಸಾರ್ ಮಂಡಳಿ ತಿಳಿಸಿತ್ತು. ಹಾಗಾಗಿ ಬಹುತೇಕರು ಕಥೆ ತಿಳಿಯದೇ ಸಿನಿಮಾದಲ್ಲಿ ನಟಿಸಿದ್ದಾರೆ” ಎಂದು ನಿರ್ದೇಶಕರು ತಿಳಿಸಿದ್ದಾರೆ.
“ನಾನು ಸೋನಾಲಿಗೆ ಕಥೆಯನ್ನು ಹೇಳಿದಾಗ, ಅವರು ಚಿತ್ರದಲ್ಲಿ ನಾಸಿರುದ್ದೀನ್ ಶಾ ಏನು ಮಾಡುತ್ತಿದ್ದಾರೆ ಎಂದು ಕೇಳಿದರು ? ಅವರು ಗಜಲ್ ಗಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದು ಇದು ಪೋಷಕ ಪಾತ್ರ ಎಂದು ಹೇಳಿದ್ದೆ.” ಎಂದು ವಿಷಯ ಬಹಿರಂಗಪಡಿಸಿದ್ದಾರೆ.
ಸರ್ಫರೋಶ್ ಚಿತ್ರ 1999 ರಲ್ಲಿ ಬಿಡುಗಡೆಯಾಯಿತು. ತೀವ್ರವಾದ ಆಕ್ಷನ್ ಸೀಕ್ವೆನ್ಸ್, ಉತ್ತಮ ಕಥಾಹಂದರ ಮತ್ತು ಪ್ರಶಂಸನೀಯ ಅಭಿನಯಕ್ಕಾಗಿ ವಿಶೇಷವಾಗಿ ಅಮೀರ್ ಮತ್ತು ನಾಸಿರುದ್ದೀನ್ ಹೆಸರು ಗಳಿಸಿದರು.
ಈ ಆಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ವಲ್ಲಭ ವ್ಯಾಸ್, ಮುಖೇಶ್ ರಿಷಿ, ದಿನೇಶ್ ಕೌಶಿಕ್, ಮಕರಂದ್ ದೇಶಪಾಂಡೆ, ಮನೋಜ್ ಜೋಷಿ, ಗೋವಿಂದ್ ನಾಮದೇವ್, ನವಾಜುದ್ದೀನ್ ಸಿದ್ದಿಕಿ, ಸುರೇಖಾ ಸಿಕ್ರಿ ಮತ್ತು ಇತರರು ನಟಿಸಿದ್ದಾರೆ.